ಸೈಬೀರಿಯ ಶಾಪಿಂಗ್ ಮಾಲ್ ನಲ್ಲಿ ಬೆಂಕಿ; 64 ಸಾವು
ಮಾಸ್ಕೊ, ಮಾ. 26: ರಶ್ಯದ ಸೈಬೀರಿಯ ಪ್ರಾಂತದ ನಗರ ಕೆಮರೊವೊದಲ್ಲಿನ ಶಾಪಿಂಗ್ ಮಾಲ್ ಒಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 64 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯದ ತುರ್ತು ಪರಿಸ್ಥಿತಿ ಸಚಿವಾಲಯ ಸೋಮವಾರ ಹೇಳಿದೆ.
ಕೆಮರೊವೊ ನಗರದ ‘ವಿಂಟರ್ ಚೆರಿ’ ಅಂಗಡಿ ಸಂಕೀರ್ಣದಿಂದ ದಟ್ಟ ಕಪ್ಪು ಹೊಗೆ ಹೊರಬರುತ್ತಿರುವುದನ್ನು ರಶ್ಯದ ಟೆಲಿವಿಶನ್ಗಳು ತೋರಿಸಿವೆ. ಇದೇ ಕಟ್ಟಡದಲ್ಲಿ ಒಂದು ಮಲ್ಟಿಪ್ಲೆಕ್ಸ್ ಸಿನೆಮಾ ಮತ್ತು ಒಂದು ಬೌಲಿಂಗ್ (ಆಟ) ಅಂಗಣವೂ ಇದೆ. ರವಿವಾರ ಅಪರಾಹ್ನ ದುರಂತ ಸಂಭವಿಸಿದಾಗ ಕಟ್ಟಡದಲ್ಲಿ ಕಿಕ್ಕಿರಿದು ಜನ ಸೇರಿದ್ದರು.
ಅದೇ ವೇಳೆ, 40 ಮಕ್ಕಳು ಸೇರಿದಂತೆ 69 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ರಕ್ಷಣಾ ಸೇವೆಗಳ ಮೂಲವೊಂದು ತಿಳಿಸಿದೆ.
ಒಂದು ಸಿನೆಮಾ ಮಂದಿರದಲ್ಲಿ ಬೆಂಕಿ ಆರಂಭಗೊಂಡಿತು ಹಾಗೂ ಅದು ಹರಡಿ 1,000 ಚದರ ಮೀಟರ್ಗೂ ಅಧಿಕ ಜಾಗವನ್ನು ಸುಟ್ಟು ಹಾಕಿತು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
‘‘ಸಿನೆಮಾ ಮಂದಿರದ ಎರಡು ಥಿಯೇಟರ್ಗಳಲ್ಲಿನ ಮೇಲ್ಛಾವಣಿಗಳು ಕುಸಿದಿವೆ’’ ಎಂದು ತನಿಖಾ ತಂಡವೊಂದು ಹೇಳಿದೆ.
ಉರಿಯುತ್ತಿರುವ ಕಟ್ಟಡದಿಂದ ಸುಮಾರು 120 ಮಂದಿಯನ್ನು ರಕ್ಷಿಸಲಾಗಿದೆ.