ವಿಮಾನವನ್ನೇ ಕದ್ದೊಯ್ದ ಉದ್ಯೋಗಿ ಮಾಡಿದ ಅನಾಹುತವೇನು?
ವಾಷಿಂಗ್ಟನ್, ಆ.11: ಸಿಯಾಟಲ್ ವಿಮಾನ ನಿಲ್ದಾಣದಿಂದ ಏರ್ ಲೈನ್ ಸಂಸ್ಥೆಯ ಮೆಕ್ಯಾನಿಕ್ ಒಬ್ಬ ವಿಮಾನವೊಂದನ್ನು ಕದ್ದು ಹಾರಿಸಿದ್ದು, ಕೆಲವೇ ಕ್ಷಣದಲ್ಲಿ ಅದು ಹತ್ತಿರದ ದ್ವೀಪದಲ್ಲಿ ಪತನಗೊಂಡಿದೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕೂಡಲೇ ಸಿಯಾಟಲ್ ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ಟೇಕ್-ಆಫ್ ಮಾಡಿದ ವಿಮಾನವನ್ನು ಎರಡು ಎಫ್-15 ಫೈಟರ್ ಜೆಟ್ ಗಳು ಬೆಂಬತ್ತಿದರೂ ಪ್ರಯೋಜನವಾಗಿಲ್ಲ. ವಿಮಾನ ಪತನದಲ್ಲಿ ವಿಮಾನವನ್ನು ಕದ್ದವ ಬದುಕಿದ್ದಾನೆಯೇ ಅಥವಾ ಸತ್ತಿದ್ದಾನೆಯೇ ಎಂದು ತಿಳಿದು ಬಂದಿಲ್ಲವಾದರೂ ಆತ ಸಾವಿಗೀಡಾಗಿರುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿದೆ.
ಇದು ಉಗ್ರವಾದಿ ಕೃತ್ಯವಲ್ಲ, ವಿಮಾನ ಕದ್ದವನು ಸ್ಥಳೀಯನಾಗಿದ್ದು, ಆತನ ವಯಸ್ಸು 29 ಎಂದು ಪೀಯರ್ಸ್ ಕೌಂಟಿ ಶೆರಿಫ್ ಹೇಳಿದ್ದಾರೆ. ಸಿಯಾಟಲ್ ವಿಮಾನ ನಿಲ್ದಾಣದ ಅಧಿಕಾರಿಗಳು ಆತ ವಿಮಾನ ಟೇಕ್-ಆಫ್ ಮಾಡಿದ ಕೂಡಲೇ ಅದನ್ನು ಕೆಳಗಿಳಿಸುವಂತೆ ಆತನ ಮನವೊಲಿಸಿದರೂ ಪ್ರಯೋಜನವಾಗಿಲ್ಲ. ವಿಮಾನ ಆಗಸದಲ್ಲಿ ಎರ್ರಾಬಿರ್ರಿಯಾಗಿ ಹಾರುತ್ತಿರುವ ವೀಡಿಯೊವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಮಾನವು ಹೊರೈಝಾನ್ ಏರ್ ಕ್ಯೂ400 ಆಗಿದೆ, ಎಂದು ಹೊರೈಝಾನ್ ಸಹಸಂಸ್ಥೆ ಅಲಾಸ್ಕಾ ಏರ್ಲೈನ್ಸ್ ಹೇಳಿದೆ. ಮಿಲಿಟರಿ ನೆಲೆಯೊಂದರ ಸಮೀಪ ಕೆಟ್ರಾನ್ ದ್ವೀಪದ ದಕ್ಷಿಣ ಭಾಗದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಕದ್ದಾತ ವೀಡಿಯೋ ಗೇಮ್ಸ್ ಆಡುತ್ತಿದ್ದುದರಿಂದ ಸುಲಭವಾಗಿ ವಿಮಾನವನ್ನು ಕೆಳಗಿಳಿಸಬಹುದೆಂದು ಅಂದುಕೊಂಡಿದ್ದ. ಸದ್ಯ ಸಿಯಾಟಲ್ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯಾಚರಿಸುತ್ತಿದೆ.