ಎಸ್ಎಲ್ಪಿಪಿಗೆ ರಾಜಪಕ್ಸ ಸೇರ್ಪಡೆ
ಕೊಲಂಬೊ,ನ.11: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ವಿವಾದಾತ್ಮಕ ನಡೆಯ ಮೂಲಕ ಪ್ರಧಾನಿಯಾಗಿ ನೇಮಿಸಲ್ಪಟ್ಟ ಶ್ರೀಲಂಕಾದ ಪ್ರಭಾವಿ ರಾಜಕಾರಣಿ ಮಹೀಂದಾ ರಾಜಪಕ್ಷ ಅವರು ರವಿವಾರ, ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್ಎಲ್ಎಫ್ಪಿ) ಪಕ್ಷದೊಂದಿಗಿನ ತನ್ನ ಐದು ದಶಕಗಳ ಬಾಂಧವ್ಯವನ್ನು ಕಡಿದುಕೊಂಡಿದ್ದಾರೆ ಹಾಗೂ ನೂತನವಾಗಿ ರಚನೆಯಾಗಿರುವ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ಎಲ್ಪಿಪಿ)ಗೆ ಸೇರ್ಪಡೆಗೊಂಡಿದ್ದಾರೆ.
ರಾಜಪಕ್ಸ ಅವರ ಈ ನಡೆಯು ಅವರು ಜನವರಿ 5ರದು ನಡೆಯಲಿರುವ ದಿಢೀರ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದೆ. ಮಾಜಿ ರಾಷ್ಟ್ರಾಧ್ಯಕ್ಷರೂ ಆಗಿರುವ ರಾಜಪಕ್ಸ ಅವರು ತನ್ನ ಬೆಂಬಲಿಗರು ಆರಂಭಿಸಿರುವ ಎಸ್ಎಲ್ಪಿಪಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ.
ಅವರ ತಂದೆ, ಡಾನ್ ಅಲ್ವಿನ್ ರಾಜಪಕ್ಸ ಅವರು 1951ರಲ್ಲಿ ಸ್ಥಾಪನೆಯಾದ ಶ್ರೀಲಂಕಾ ಫ್ರೀಡಂ ಪಕ್ಷದ ಸ್ಥಾಪಕ ಸದಸ್ಯರಾಗಿದ್ದಾರೆ.
ರಾಜಕೀಯಕ್ಕೆ ರಾಜಪಕ್ಸ ಅವರು ಪುನಾರಗಮನಕ್ಕಾಗಿ ಸೂಕ್ತ ವೇದಿಕೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಅವರ ಬೆಂಬಲಿಗರು ಕಳೆದ ವರ್ಷ ಎಸ್ಎಲ್ಪಿಪಿ ಪಕ್ಷವನ್ನು ಸ್ಥಾಪಿಸಿದ್ದರು. ಕಳೆದ ಫೆಬ್ರವರಿಯಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 340 ಸ್ಥಾನಗಳ ಪೈಕಿ ಮೂರನೆ ಎರಡರಷ್ಟು ಸ್ಥಾನಗಳಲ್ಲಿ ಬಹುಮತ ಪಡೆಯಿತು.
ಶ್ರೀಲಂಕಾ ರಾಜಕೀಯದ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಲುಪಟ್ಟಿರುವ 72 ವರ್ಷ ವಯಸ್ಸಿನ ರಾಜಪಕ್ಸ ಅವರು 2005ರಿಂದೀಚೆಗೆ ಒಂದು ದಶಕದ ಕಾಲ ಶ್ರೀಲಂಕಾದ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. 2015ರ ಜನವರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರನ್ನು, ಉಪಾಧ್ಯಕ್ಷ ಸಿರಿಸೇನಾ ಅವರು, ರನಿಲ್ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್ಪಿ) ಪಕ್ಷದ ಬೆಂಬಲದೊಂದಿಗೆ ಪರಾಭವಗೊಳಿಸಿದ್ದರು.
ಆದಾಗ್ಯೂ ವಿಶೇಷವಾಗಿ ಆರ್ಥಿಕತೆ ಮತ್ತು ಭದ್ರತೆಗೆ ಸಂಬಂಧಿಸಿ ಅಧಿಕಾರ ಹಂಚಿಕೆಯ ವಿಷಯದಲ್ಲಿ ಸಿರಿಸೇನಾ ಹಾಗೂ ವಿಕ್ರಮಸಿಂಘೆ ನಡುವೆ ತೀವ್ರ ಭಿನ್ನಾಭಿಪ್ರಾಯವುಂಟಾದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಸಂಬಂಧ ಹದಗೆಟ್ಟಿತ್ತು. ಅಂತಿಮವಾಗಿ ಅಕ್ಟೋಬರ್ 26ರಂದು ಸಿರಿಸೇನಾ ಅವರು ಏಕಾಏಕಿಯಾಗಿ ವಿಕ್ರಮಸಿಂೆ ಅವರನ್ನು ಉಚ್ಚಾಟಿಸಿ, ಅವರ ಜಾಗದಲ್ಲಿ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕಗೊಳಿಸಿದ್ದಾರೆ.