ಟ್ರಂಪ್ ಅಶಿಸ್ತಿನ ಮನುಷ್ಯ: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ
ವಾಷಿಂಗ್ಟನ್, ಡಿ.8: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ರೆಕ್ಸ್ ಟೆಲ್ಲರ್ಸನ್ ಕೊನೆಗೂ ಮೌನ ಮುರಿದಿದ್ದು, ತಮ್ಮ ಮಾಜಿ ಬಾಸ್ ಡೊನಾಲ್ಡ್ ಟ್ರಂಪ್ ತೀರಾ ಅಶಿಸ್ತಿನ ಮನುಷ್ಯ ಮತ್ತು ಕಾನೂನು ಉಲ್ಲಂಘಿಸುವ ವ್ಯಕ್ತಿ ಎಂದು ಟೀಕಿಸಿದ್ದಾರೆ.
"ಶಿಸ್ತು ಹಾಗೂ ತೀರಾ ಪ್ರಕ್ರಿಯಾತ್ಮಕ ಮೊಬಿಲ್ ಕಾರ್ಪೊರೇಶನ್ ಹಿನ್ನೆಲೆಯಿಂದ ಬಂದ ನನಗೆ ಸವಾಲು ಎಂದರೆ, ತೀರಾ ಅಶಿಸ್ತಿನ, ಅಧ್ಯಯನದಲ್ಲಿ ಆಸಕ್ತಿ ಇಲ್ಲದ, ಟಿಪ್ಪಣಿಯನ್ನು ಓದದ, ಬಹುತೇಕ ಅಂಶಗಳ ಬಗ್ಗೆ ವಿವರಗಳನ್ನು ಪಡೆಯುವ ಆಸಕ್ತಿ ಇಲ್ಲದ ವ್ಯಕ್ತಿಯ ಜತೆ ಕಾರ್ಯನಿರ್ವಹಿಸುವುದು" ಎಂದು ಟೆಕ್ಸಾಸ್ನ ಹೂಸ್ಟನ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಟೆಲ್ಲರ್ಸನ್ ವಿವರಿಸಿದರು.
ವೃತ್ತಿಯಲ್ಲಿ ತೈಲ ಉದ್ಯಮಿಯಾದ ಟೆಲ್ಲರ್ಸನ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಟ್ರಂಪ್ ಅಚ್ಚರಿ ಮೂಡಿಸಿದ್ದರು. ಆದರೆ ಇಬ್ಬರ ನಡುವಿನ ಸಂಬಂಧ ಸುಗಮವಾಗಿ ಸಾಗದೇ ಒಮ್ಮೆ ಅಧ್ಯಕ್ಷರನ್ನು ಪೆದ್ದ ಎಂದು ಕರೆದಿದ್ದರು ಎನ್ನಲಾಗಿದೆ. ಇದನ್ನು ಎಲ್ಲೂ ಅವರು ಬಹಿರಂಗವಾಗಿ ನಿರಾಕರಿಸಿಲ್ಲ. ಕಳೆದ ಮಾರ್ಚ್ನಲ್ಲಿ ಟೆಲ್ಲರ್ಸನ್ ಅವರನ್ನು ವಜಾಗೊಳಿಸಲಾಗಿತ್ತು.
"ಅಧ್ಯಕ್ಷರು ಪದೇಪದೇ, ಇದನ್ನು ಮಾಡಲು ನಾನು ಬಯಸಿದ್ದೇನೆ. ಅದನ್ನು ಹೀಗೆಯೇ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ ಎನ್ನುತ್ತಿದ್ದರು. ಅದಕ್ಕೆ ಪ್ರತಿಯಾಗಿ ನಾನು, ಮಿಸ್ಟರ್ ಪ್ರಸಿಡೆಂಟ್, ನೀವು ಏನು ಮಾಡಲು ಬಯಸಿದ್ದೀರಿ ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನೀವು ಹೇಳಿದಂತೆ ಅದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಕಾನೂನು ಉಲ್ಲಂಘನೆಯಾಗುತ್ತಿದ್ದೆ ಎಂದು ಹೇಳುತ್ತಿದ್ದೆ"