ಸುಡಾನ್: ಸೇನಾ ಮಂಡಳಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ರಕ್ಷಣಾ ಸಚಿವ
ಖಾರ್ತೂಮ್ (ಸುಡಾನ್), ಎ. 13: ಸುಡಾನ್ನ ಪರಿವರ್ತನಾ ಸೇನಾ ಮಂಡಳಿಯ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯುವುದಾಗಿ ಸುಡಾನ್ ರಕ್ಷಣಾ ಸಚಿವ ಅವಾದ್ ಇಬ್ನ್ ಅವುಫ್ ಶುಕ್ರವಾರ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಉಮರ್ ಅಲ್-ಬಶೀರ್ರನ್ನು ಸೇನೆಯು ಕ್ಷಿಪ್ರಕ್ರಾಂತಿಯೊಂದರಲ್ಲಿ ಕಿತ್ತೊಗೆದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಲೆ.ಜ. ಅಬ್ದುಲ್ ಪತ್ತಾಹ್ ಅಬ್ದುಲ್ರಹಮಾನ್ ಬುರ್ಹಾನ್ ಪರಿವರ್ತನಾ ಸೇನಾ ಮಂಡಳಿಯ ನೂತನ ಮುಖ್ಯಸ್ಥರಾಗಿರುತ್ತಾರೆ ಎಂದು ಸರಕಾರಿ ಟೆಲಿವಿಶನ್ನಲ್ಲಿ ಮಾಡಿದ ಭಾಷಣದಲ್ಲಿ ಅವುಫ್ ಹೇಳಿದ್ದಾರೆ.
ಪರಿವರ್ತನಾ ಸೇನಾ ಮಂಡಳಿಯು ಎರಡು ವರ್ಷಗಳ ಅವಧಿಗೆ ದೇಶದ ಆಡಳಿತವನ್ನು ನಡೆಸುತ್ತದೆ. ಎರಡು ವರ್ಷಗಳ ಕೊನೆಯಲ್ಲಿ ಚುನಾವಣೆ ನಡೆಯುತ್ತದೆ.
‘‘ಪರಿವರ್ತನಾ ಸೇನಾ ಮಂಡಳಿಯ ಮುಖ್ಯಸ್ಥನಾಗಿರುವ ನಾನು, ನನ್ನ ಹುದ್ದೆಯನ್ನು ತೊರೆಯುತ್ತೇನೆ ಎಂದು ಘೋಷಿಸುತ್ತೇನೆ’’ ಎಂದು ಅವುಫ್ ಹೇಳಿದರು.
ಇದಕ್ಕೂ ಮೊದಲು, ಸೇನಾ ಮಂಡಳಿಯ ರಾಜಕೀಯ ಸಮಿತಿಯ ಮುಖ್ಯಸ್ಥ ಜನರಲ್ ಉಮರ್ ಝೈನ್ ಆಬಿದೀನ್, ರಾಜಕೀಯ ಗುಂಪುಗಳೊಂದಿಗೆ ಸಮಿತಿಯು ಮಾತುಕತೆ ನಡೆಸುತ್ತದೆ ಎಂದು ಹೇಳಿದ್ದರು.
ಜನಾಂಗೀಯ ಹತ್ಯೆಗಾಗಿ ಅಂತರ್ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಪದಚ್ಯುತ ಅಧ್ಯಕ್ಷ ಉಮರ್ ಅಲ್-ಬಶೀರ್ರನ್ನು ಗಡಿಪಾರು ಮಾಡುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ. ಬದಲಿಗೆ, ಅವರನ್ನು ಸುಡಾನ್ನಲ್ಲೇ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದಿದ್ದಾರೆ.