ನಕಲಿ ಪಿಸ್ತೂಲ್ ಹಿಡಿದಿದ್ದ ಯುವತಿಯನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ
ಕ್ಯಾಲಿಫೋರ್ನಿಯಾ, ಜು.13: ಫುಲ್ಲೆರ್ಟನ್ ನ ಪೊಲೀಸ್ ಅಧಿಕಾರಿಯೊಬ್ಬರು 17 ವರ್ಷದ ಯುವತಿ ಹನ್ನಾಹ್ ವಿಲಿಯಮ್ಸ್ ಳನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆಯ ವೀಡಿಯೋವನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಜುಲೈ 5ರಂದು ನಡೆದ ಈ ಘಟನೆಯ ವೀಡಿಯೋದಲ್ಲಿ ಆ ಹುಡುಗಿಯ ಮೇಲೆ ಗುಂಡಿಕ್ಕಲು ಕಾರಣವೇನೆಂದು ಸ್ಪಷ್ಟವಾಗಿಲ್ಲ ಹಾಗೂ ಘಟನೆಯ ವೀಡಿಯೋದಲ್ಲಿ ಯಾವುದೇ ದನಿ ಕೂಡ ಕೇಳಿಸುತ್ತಿಲ್ಲ.
ಆದರೆ ಯುವತಿ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಗುಂಡಿಕ್ಕುವ ಭಂಗಿಯಲ್ಲಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಫುಲ್ಲೆರ್ಟನ್ ಪೊಲೀಸ್ ಇಲಾಖೆ ಹೇಳಿದೆ. ಆದರೆ ಆಕೆಗೆ ಗುಂಡಿಕ್ಕಿದ ನಂತರ ಆಕೆಯ ಕೈಯ್ಯಲ್ಲಿರುವುದು ನಕಲಿ ಪಿಸ್ತೂಲು ಎಂದು ತಿಳಿದು ಬಂದಿತ್ತು. ವಿಡಿಯೋದಲ್ಲಿ ಆ ಯುವತಿ ನೆಲಕ್ಕೆ ಬೀಳುತ್ತಿದ್ದಂತೆಯೇ ಆಕೆಗೆ ಅಲುಗಾಡದಂತೆ ಆ ಅಧಿಕಾರಿ ಬೊಬ್ಬಿಡುವುದು ಕೇಳಿಸುತ್ತದೆ. ಹೊಟ್ಟೆ ಭಾಗ ಕೆಳಗಿರಿಸಿ ನೆಲದಲ್ಲಿರುವಂತೆ ಆ ಅಧಿಕಾರಿ ಆಕೆಗೆ ಹೇಳಿದಾಗ ಆಕೆ ಅದೇ ರೀತಿ ಮಾಡಿದ್ದಾಳೆ.
ಆಗ ಆ ಸಮಯ ಕರ್ತವ್ಯದಲ್ಲಿಲ್ಲದ ಇನ್ನೊಬ್ಬ ಅಧಿಕಾರಿ ಹಾಗೂ ಘಟನೆಯ ಸಾಕ್ಷಿ ವೀಡಿಯೋದಲ್ಲಿ ಕಾಣಿಸಿದಾಗ ಯುವತಿ “ನನಗೆ ಉಸಿರಾಡಲು ಅಗುತ್ತಿಲ್ಲ, ನನಗೆ ಸಹಾಯ ಮಾಡುತ್ತೀರಾ?'' ಎಂದು ಗೋಗರೆಯುತ್ತಿರುವಂತೆಯೇ ಆಕೆಗೆ ಕೈಕೋಳ ತೊಡಿಸುವುದೂ ಕಾಣಿಸುತ್ತದೆ. ನಂತರವಷ್ಟೇ ಆಕೆಯ ಕೈಯ್ಯಲ್ಲಿದ್ದ ಪಿಸ್ತೂಲ ನಕಲಿ ಎಂಬುದು ತಿಳಿಯುತ್ತದೆ. ಆಕೆಯ ಎದೆ ಹಾಗೂ ಕಾಲಿಗೆ ಗುಂಡೇಟು ತಗಲಿದ್ದು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ.
ವಿಲಿಯಮ್ಸ್ ಗೆ ಗುಂಡಿಕ್ಕಲು ಕಾರಣವೇನು ಹಾಗೂ ಅಷ್ಟೊಂದು ಗಾಯಗೊಂಡಿರುವಾಗಲೂ ಆಕೆಗೇಕೆ ಕೈಕೋಳ ತೊಡಿಸಲಾಯಿತೆಂದು ಆಕೆಯ ಕುಟುಂಬ ಪ್ರಶ್ನಿಸುತ್ತಿದೆ.
ಯುವತಿ ಹನ್ನಾಹ್ ವಿಲಿಯಮ್ಸ್ ಕಳೆದ ಶುಕ್ರವಾರ ಸಂಜೆ ತನ್ನ ಕುಟುಂಬದ ಬಾಡಿಗೆ ಕಾರಿನಲ್ಲಿ ಹೊರ ಹೋಗಿದ್ದಳು. ಅತಿ ವೇಗದಿಂದ ಕಾರು ಚಲಾಯಿಸಿದ್ದ ಆಕೆ ಉದ್ದೇಶಪೂರ್ವಕವಾಗಿ ಪೊಲೀಸ್ ಅಧಿಕಾರಿಯ ಕಾರಿಗೆ ತನ್ನ ಕಾರನ್ನು ಢಿಕ್ಕಿ ಹೊಡೆಸಿದ್ದಾಳೆಂದು ಪೊಲೀಸರು ಹೇಳುತ್ತಿದ್ದಾರೆ. ಅಪಘಾತದ ದೃಶ್ಯ ಕ್ಯಾಮರದಲ್ಲಿ ಸೆರೆ ಸಿಕ್ಕಿಲ್ಲ. ವಿಲಿಯಮ್ಸ್ ಖಿನ್ನತೆ ಸಮಸ್ಯೆಗಾಗಿ ಔಷಧಿ ತೆಗೆದುಕೊಳ್ಳುತ್ತಿದ್ದಳು ಎಂದು ಆಕೆಯ ಕುಟುಂಬ ತಿಳಿಸಿದ್ದು, ಆಕೆ ಕಾರು ತೆಗೆದುಕೊಂಡು ಹೋಗಿದ್ದು ಅಚ್ಚರಿ ಎಂದು ಹೇಳಿದೆ.