ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಗೆ ಕನಿಷ್ಠ 9 ಬಲಿ: 30ಕ್ಕೂ ಅಧಿಕ ಮಂದಿಗೆ ಗಾಯ,
ಡೇರಾ ಇಸ್ಮಾಯೀಲ್ ಖಾನ್,ಜು.21: ಪಾಕಿಸ್ತಾನದ ಡೇರಾ ಇಸ್ಮಾಯೀಲ್ ಖಾನ್ ನಗರದ ಆಸ್ಪತ್ರೆಯೊಂದರಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬಾಕೆ ನಡೆಸಿದ ದಾಳಿಗೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಹಾಗೂ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮೋಟಾರು ಸೈಕಲ್ಗಳಲ್ಲಿ ಆಗಮಿಸಿದ ಬಂಧೂಕುಧಾರಿಗಳು ವಸತಿಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಗುಂಡುಹಾರಿಸಿ, ಇಬ್ಬರನ್ನು ಹತ್ಯೆಗೈದರು. ಇದಾದ ಕೆಲವೇ ನಿಮಿಷಗಳ ಬಳಿಕ ಮಹಿಳಾ ಬಾಂಬರ್ ಒಬ್ಬಾಕೆ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡಾಗ ನಾಲ್ವರು ಪೊಲೀಸರು ಹಾಗೂ ನಾಲ್ವರು ಪಾಕ್ ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ 8 ಮಂದಿ ಪೊಲೀಸರು ಕೂಡಾ ಸೇರಿದ್ದಾರೆ. ಹಲವಾರು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದಾಗಿ ಮೂಲಗಳು ತಿಳಿಸಿವೆ.
ಸ್ಫೋಟದಿಂದಾಗಿ ಆಸ್ಪತ್ರೆ ತುರ್ತುಚಿಕಿತ್ಸಾ ಕೊಠಡಿಗೆ ಭಾರೀ ಹಾನಿಯಾಗಿದೆ. ದಾಳಿಯ ಹೊಣೆಯನ್ನು ಪಾಕಿಸ್ತಾನ್ ತಾಲಿಬ್ಾ ಗುಂಪು ವಹಿಸಿಕೊಂಡಿದೆ. ಆದರೆ ಆತ್ಮಹತ್ಯಾ ದಾಳಿ ನಡೆಸಿದ ಬಾಂಬರ್ ಮಹಿಳೆ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ. ಸುಮಾರು ಎರಡು ದಶಕಗಳಿಂದ ಪಾಕಿಸ್ತಾನದಲ್ಲಿ ತಾಲಿಬಾನ್ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದೆಯಾದರೂ, ದಾಳಿಗೆ ಮಹಿಳೆಯನ್ನು ಬಳಸಿಕೊಂಡಿರುವುದು ಇದೇ ಮೊದಲ ಸಲವಾಗಿದೆ.