ರಶ್ಯ: ರಾಕೆಟ್ ಇಂಜಿನ್ ಸ್ಫೋಟ: 5 ಸಾವು
ವಿಕಿರಣ ಮಟ್ಟದಲ್ಲಿ ಏರಿಕೆ
ಮಾಸ್ಕೋ, ಆ. 10: ಉತ್ತರ ರಶ್ಯದ ಸೇನಾ ನೆಲೆಯೊಂದರಲ್ಲಿ ಪರೀಕ್ಷೆಗಳನ್ನು ನಡೆಸಿದ ವೇಳೆ ಸಂಭವಿಸಿದ ಅಪಘಾತದಲ್ಲಿ ತನ್ನ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಶ್ಯದ ಸರಕಾರಿ ಪರಮಾಣು ಸಂಸ್ಥೆ ರೊಸಟೊಮ್ ಶನಿವಾರ ತಿಳಿಸಿದೆ.
ದ್ರವ ಚಾಲಿತ ರಾಕೆಟ್ ಇಂಜಿನೊಂದರ ಮೇಲೆ ನಡೆದ ಪರೀಕ್ಷೆಗಳ ವೇಳೆ ಈ ಅಪಘಾತ ಸಂಭವಿಸಿದೆ ಎಂದು ರೋಸಟೊಮನ್ನು ಉಲ್ಲೇಖಿಸಿ ಆರ್ಐಎ ವರದಿ ಮಾಡಿದೆ.
ಅಪಘಾತದಲ್ಲಿ ತನ್ನ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ರೋಸಟೊಮ್ ತಿಳಿಸಿದೆ.
ಅರ್ಚಂಗೆಲ್ಸ್ಕ್ ವಲಯದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ರಾಕೆಟ್ ಇಂಜಿನ್ ಸ್ಫೋಟಗೊಂಡಾಗ, ಅದರ ಸಮೀಪದ ನಗರವೊಂದರ ವಿಕಿರಣ ಮಟ್ಟ ಹೆಚ್ಚಾಗಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಇದರ ಪರಿಣಾಮವಾಗಿ, ಬಿಳಿ ಸಮುದ್ರದ ಕೊಲ್ಲಿಯೊಂದರ ಭಾಗವನ್ನು ಹಡಗುಯಾನಕ್ಕೆ ಮುಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಕಿರಣದ ಪರಿಣಾಮಗಳನ್ನು ತಗ್ಗಿಸಲು ಬಳಸಲಾಗುವ ಅಯೋಡಿನನ್ನು ಸ್ಥಳೀಯ ನಿವಾಸಿಗಳು ಶೇಖರಿಸುತ್ತಿದ್ದಾರೆ.
Next Story