ಅಮೆರಿಕದ ಪತ್ರಕರ್ತರು ಜಗತ್ತಿನ ಅತಿ ಭ್ರಷ್ಟರು: ಟ್ರಂಪ್
ವಾಶಿಂಗ್ಟನ್, ನ. 27: ಯುಕ್ರೇನ್ ವಿಷಯದಲ್ಲಿ ನಾನು ಏನೂ ತಪ್ಪು ಮಾಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದರು.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಯನ್ನು ಹಣಿಯಲು ಟ್ರಂಪ್ ಯುಕ್ರೇನ್ ಸರಕಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಆರೋಪಿಸಿ, ಅಮೆರಿಕ ಸಂಸತ್ತು ಕಾಂಗ್ರೆಸ್ನಲ್ಲಿ ಪ್ರತಿಪಕ್ಷಗಳು ಮಂಡಿಸಿರುವ ವಾಗ್ದಂಡನೆ ವಿಚಾರಣೆಯನ್ನು ಪ್ರಸ್ತಾಪಿಸಿ ಅವರು ಈ ಮಾತುಗಳನ್ನು ಹೇಳಿದರು.
ಭಾಷಣದುದ್ದಕ್ಕೂ ಟ್ರಂಪ್ ತನ್ನ ರಾಜಕೀಯ ವೈರಿಗಳ ಮೇಲೆ ವಿಷ ಉಗುಳುತ್ತಲೇ ಸಾಗಿದರು. ವಾಶಿಂಗ್ಟನ್ನ ವಿಫಲ ಆಡಳಿತವೊಂದು, ಅವರ ದೋಷಪೂರಿತ ವ್ಯವಸ್ಥೆಯನ್ನು ಬಯಲುಗೊಳಿಸಿರುವುದಕ್ಕಾಗಿ ನನ್ನ ವಿರುದ್ಧ ಹಗೆ ಸಾಧಿಸುತ್ತಿದೆ ಎಂದು ಅವರು ಪದೇ ಪದೇ ಆರೋಪಿಸಿದರು.
ಈ ಸಂದರ್ಭದಲ್ಲಿ ಅವರು ಅಮೆರಿಕದ ಪತ್ರಕರ್ತರನ್ನೂ ಬಿಡಲಿಲ್ಲ. ಎಂದಿನಂತೆ ಅವರಿಗಾಗಿ ವಿಶೇಷ ವಿಷ ಬಾಣಗಳನ್ನು ಮೀಸಲಿಟ್ಟರು. ಅಮೆರಿಕದ ಪತ್ರಕರ್ತರು ಜಗತ್ತಿನ ಅತಿ ಭಷ್ಟ ಜನರ ಪೈಕಿ ಕೆಲವರು ಎಂದು ಹೇಳಿದರು.
ಇದನ್ನು ಕೇಳಿದ ಸಭೆಯಲ್ಲಿದ್ದ ಸಾವಿರಾರು ಜನರು, ಈ ಕಾರ್ಯಕ್ರಮವನ್ನು ವರದಿ ಮಾಡುತ್ತಿದ್ದ ಪತ್ರಕರ್ತರತ್ತ ತಿರುಗಿ ನಿಂದನಾತ್ಮಕ ಘೋಷಣೆಗಳನ್ನು ಕೂಗಿದರು.