ಹೊಟೇಲಲ್ಲಿ ಬಿಸಿ ನೀರಿನ ಪ್ರವಾಹ: 5 ಸಾವು
ಮಾಸ್ಕೊ (ರಶ್ಯ), ಜ. 20: ರಶ್ಯದ ಪೆರ್ಮ್ ಎಂಬ ನಗರದಲ್ಲಿ ಸೋಮವಾರ ಬಿಸಿನೀರಿನ ಪ್ರವಾಹದಲ್ಲಿ ಹೊಟೇಲೊಂದರಲ್ಲಿದ್ದ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ರವಿವಾರ ರಾತ್ರಿ ಬಿಸಿ ನೀರನ್ನು ಒಯ್ಯುತ್ತಿದ್ದ ಕೊಳವೆಯು ಸ್ಫೋಟಗೊಂಡಾಗ ಹೊಟೇಲ್ನ ತಳದಲ್ಲಿರುವ ಕೋಣೆಗೆ ಬಿಸಿ ನೀರು ಪ್ರವಾಹದಂತೆ ನುಗ್ಗಿತು.
ಜನವಾಸ್ತವ್ಯದ ಕಟ್ಟಡದ ತಳದಲ್ಲಿರುವ ಹೊಟೇಲ್ನಲ್ಲಿ ಈ ಘಟನೆ ಸಂಭವಿಸಿದೆ. ದುರಂತದಲ್ಲಿ ಗಾಯಗೊಂಡ ಕನಿಷ್ಠ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಮುಂಜಾವಿನ ಅವಧಿಯಲ್ಲಿ ಹೊಟೇಲ್ನ ಪ್ರವೇಶ ದ್ವಾರದಿಂದ ದಟ್ಟ ಹಬೆ ಹೊರಬರುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾದ ವೀಡಿಯೊಗಳು ತೋರಿಸಿವೆ.
ಬಿಸಿ ನೀರನ್ನು ಸಾಗಿಸುವ ಕೊಳವೆಯು 1962ರಿಂದಲೂ ಕಾರ್ಯನಿರ್ವಹಿಸುತ್ತಿವೆ ಹಾಗೂ ಹಿಂದೆ ಹಲವು ಬಾರಿ ತುಂಡಾಗಿತ್ತು ಎಂದು ಮೂಲವೊಂದನ್ನು ಉಲ್ಲೇಖಿಸಿ ಆರ್ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story