ಸಾರ್ಸ್ ಮೀರಿಸಿದ ಕೊರೋನಾ ವೈರಸ್ : ಸಾವಿನ ಸಂಖ್ಯೆ 803ಕ್ಕೆ ಏರಿಕೆ
ಬೀಜಿಂಗ್ : ಚೀನಾದಲ್ಲಿ ಕೊರೋನಾ ವೈರಸ್ನಿಂದ ತತ್ತರಿಸಿರುವ ಹ್ಯುಬೀ ಪ್ರಾಂತ್ಯದಲ್ಲಿ ರವಿವಾರ ಮತ್ತೆ 81 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 803ಕ್ಕೆ ತಲುಪಿದೆ.
ಮಾರಕ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್)ನಿಂದ ವಿಶ್ವಾದ್ಯಂತ ಮೃತಪಟ್ಟವರ ಸಂಖ್ಯೆಯನ್ನು ಕೊರೋನಾ ಮೀರಿಸಿದೆ. 2002-03ರಲ್ಲಿ ವಿಶ್ವವನ್ನು ಬೆಚ್ಚಿ ಬೀಳಿಸಿದ್ದ ಸಾರ್ಸ್ ಸಾಂಕ್ರಾಮಿಕದಿಂದ 774 ಮಂದಿ ಮೃತಪಟ್ಟಿದ್ದರು.
ಚೀನಾದ ಕೇಂದ್ರ ಪ್ರಾಂತ್ಯದಲ್ಲಿ ಮತ್ತೆ 2147 ಪ್ರಕರಣಗಳು ಕಾಣಿಸಿಕೊಂಡಿರುವುದನ್ನು ಹ್ಯುಬೀ ಆರೋಗ್ಯ ಆಯೋಗ ದೃಢಪಡಿಸಿದೆ. ಡಿಸೆಂಬರ್ನಲ್ಲಿ ಇಲ್ಲಿ ಮೊದಲ ಬಾರಿಗೆ ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಇದುವರೆಗೆ 36,690 ಪ್ರಕರಣಗಳು ದೃಢಪಟ್ಟಿವೆ.
ಹ್ಯುಬೀ ರಾಜಧಾನಿ ವೂಹಾನ್ನಲ್ಲಿ ಕಳೆದ ವರ್ಷ ಕಾಡು ಪ್ರಾಣಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಲ್ಲಿ ಹೊಸ ವೈರಸ್ ಕಂಡು ಬಂದಿತ್ತು. ಬಳಿಕ ಇಡೀ ದೇಶಕ್ಕೆ ಈ ಸೋಂಕು ಹರಡಿತ್ತು. ಚೀನಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ವೈರಸ್ ದಾಳಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಹೇಳಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವೂಹಾನ್ನಲ್ಲಿ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷ ವಯಸ್ಸಿನ ಅಮೆರಿಕ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ರಾಯಭಾರ ಕಚೇರಿ ಹೇಳಿದೆ. ಅಂತೆಯೇ ಜಪಾನ್ ಪ್ರಜೆಯೊಬ್ಬರು ವೈರಸ್ ನಿಂದ ಮೃತಪಟ್ಟಿರುವುದನ್ನು ಅಲ್ಲಿನ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಚೀನಾ ಹೊರತುಪಡಿಸಿದರೆ ಹಾಂಕಾಂಗ್ ಮತ್ತು ಫಿಲಿಫೀನ್ಸ್ನಲ್ಲಿ ಮಾತ್ರ ಸಾವು ಸಂಭವಿಸಿದೆ.