ಕೊರೋನವೈರಸ್ ಸೋಲಿಸಲು ‘ಲಾಕ್ ಡೌನ್’ ಸಾಕಾಗುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಲಂಡನ್, ಮಾ. 22: ಕೊರೋನವೈರಸ್ ವಿರುದ್ಧ ಹೋರಾಡಲು ದೇಶಗಳು ಕೇವಲ ಸ್ಥಳಗಳಿಗೆ ಬೀಗಮುದ್ರೆ ಹಾಕಿದರೆ ಸಾಕಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತ ಮೈಕ್ ರಯಾನ್ ರವಿವಾರ ಹೇಳಿದ್ದಾರೆ.
ನಂತರದ ದಿನಗಳಲ್ಲಿ ವೈರಸ್ ಮರಳಿ ಬಾರದಂತೆ ತಡೆಯಲು ಸದೃಢ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ನಾವೀಗ ಮಾಡಬೇಕಾಗಿರುವುದೆಂದರೆ ರೋಗಿಗಳನ್ನು ಮತ್ತು ಸೋಂಕಿಗೆ ಒಳಗಾದವರನ್ನು ಪತ್ತೆಹಚ್ಚುವುದು, ಅವರನ್ನು ಇತರರಿಂದ ಬೇರ್ಪಡಿಸುವುದು, ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದನ್ನು ಪತ್ತೆಹಚ್ಚುವುದು ಹಾಗೂ ಅವರನ್ನು ಬೇರ್ಪಡಿಸುವುದು’’ ಎಂದು ಬಿಬಿಸಿಯ ‘ಆ್ಯಂಡ್ರೂ ಮಾರ್ ಶೋ’ದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
‘‘ಈಗ ಬೀಗಮುದ್ರೆಯ ವಿಷಯದಲ್ಲಿ ಇರುವ ಅಪಾಯವೆಂದರೆ, ನಾವೀಗ ಪ್ರಬಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳದಿದ್ದರೆ, ಈ ಚಲನವಲನ ನಿರ್ಬಂಧಗಳು ಮತ್ತು ಬೀಗಮುದ್ರೆಗಳನ್ನು ತೆರವುಗೊಳಿಸಿದಾಗ ರೋಗವು ಮತ್ತೆ ಕಾಣಿಸಿಕೊಳ್ಳುವ ಅಪಾಯವಿದೆ’’ ಎಂದು ಅವರು ನುಡಿದರು.