ಅಮೆರಿಕ: 2ನೇ ದಿನವೂ ಸಾವಿನ ಸಂಖ್ಯೆ ಇಳಿಮುಖ
24 ಗಂಟೆಗಳಲ್ಲಿ 830 ಸಾವು
ವಾಶಿಂಗ್ಟನ್, ಮೇ 12: ಸತತ ಎರಡನೇ ದಿನವೂ ಅಮೆರಿಕದಲ್ಲಿ ನೂತನ-ಕೊರೋನ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಇಳಿಮುಖವಾಗಿ ಸಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 830 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸೋಮವಾರದ ಅಂಕಿಅಂಶಗಳು ತಿಳಿಸಿವೆ.
ಇದರೊಂದಿಗೆ ದೇಶದಲ್ಲಿ ಕೊರೋನ ವೈರಸ್ಗೆ ಬಲಿಯಾದವರ ಒಟ್ಟು ಸಂಖ್ಯೆ 80,352ನ್ನು ತಲುಪಿದೆ.
ಅಮೆರಿಕದಲ್ಲಿ ರವಿವಾರ 776 ಸಾವುಗಳು ವರದಿಯಾಗಿದ್ದವು. ಇದು ಮಾರ್ಚ್ ಬಳಿಕ ಆ ದೇಶದಲ್ಲಿ ದಾಖಲಾದ ಕನಿಷ್ಠ ಸಾವಿನ ಸಂಖ್ಯೆಯಾಗಿದೆ.
ಆದರೆ, ಅಮೆರಿಕದ ಕೆಲವು ರಾಜ್ಯಗಳು ಬೀಗಮುದ್ರೆ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಸಾವಿನ ಸಂಖ್ಯೆ ಮತ್ತೆ ಏರುಮುಖವಾಗಬಹುದು ಎಂಬ ಭೀತಿಯನ್ನು ಪರಿಣತರು ವ್ಯಕ್ತಪಡಿಸಿದ್ದಾರೆ.
ದೇಶದಲ್ಲೀಗ ಒಟ್ಟು 13,46,723 ಸೋಂಕು ಪ್ರಕರಣಗಳು ದೃಢಪಟ್ಟಿವೆ.
ನ್ಯೂಯಾರ್ಕ್ ನಗರದ ಸಾವಿನ ಸಂಖ್ಯೆ ಹಲವು ಸಾವಿರದಷ್ಟು ಅಧಿಕ?
ನ್ಯೂಯಾರ್ಕ್, ಮೇ 12: ನ್ಯೂಯಾರ್ಕ್ ನಗರದ ಕೊರೋನ ವೈರಸ್ ಸಾವಿನ ಸಂಖ್ಯೆ ಸ್ಥಳೀಯ ಸರಕಾರದ ಅಧಿಕೃತ ಸಂಖ್ಯೆಗಿಂತ ಹಲವು ಸಾವಿರದಷ್ಟು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ವರದಿಯೊಂದು ಸೋಮವಾರ ತಿಳಿಸಿದೆ.
ನ್ಯೂಯಾರ್ಕ್ನಲ್ಲಿ ಮಾರ್ಚ್ 11 ಮತ್ತು ಮೇ 2ರ ನಡುವೆ ದಾಖಲಾಗಿರುವ ಸಾವಿನ ಸಂಖ್ಯೆಗಿಂತ ಅಲ್ಲಿ ಸುಮಾರು 24,172 ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಕೇಂದ್ರದ ವಿಶ್ಲೇಷಣೆ ತಿಳಿಸಿದೆ.
ಆ ಅವಧಿಯಲ್ಲಿ ನಗರದಲ್ಲಿ 13,831 ಕೋವಿಡ್-19 ಸಾವುಗಳು ಹಾಗೂ 5,048 ಸಂಭಾವ್ಯ ಕೋವಿಡ್-19 ದಾಖಲಾಗಿದ್ದವು. ಇದರೊಂದಿಗೆ ಕೊರೋನ ವೈರಸ್ ಸಾವಿನ ಸಂಖ್ಯೆ 18,879 ಆಗಿತ್ತು.