ರಶ್ಯ ವಕೀಲರಿಂದ ಹಿಲರಿ ಕುರಿತ ಮಾಹಿತಿ ಬಯಸಿದ್ದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್ ಪುತ್ರ
ವಾಶಿಂಗ್ಟನ್, ಜು. 11: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅವಧಿಯಲ್ಲಿ ರಶ್ಯದ ವಕೀಲರೊಬ್ಬರನ್ನು ತಾನು ಭೇಟಿ ಮಾಡಿದ್ದು ಹೌದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹಿರಿಯ ಪುತ್ರ ಒಪ್ಪಿಕೊಂಡಿದ್ದಾರೆ.
ಟ್ರಂಪ್ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಮಾಸ್ಕೊದ ಗಾಯಕರೊಬ್ಬರ ಸೂಚನೆಯಂತೆ ಈ ಭೇಟಿಯನ್ನು ಏರ್ಪಡಿಸಲಾಗಿತ್ತು.
ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಬಗ್ಗೆ ಮಾಹಿತಿ ಪಡೆಯುವ ನಿರೀಕ್ಷೆಯಿಂದ ತಾನು ಆ ಸಭೆಯಲ್ಲಿ ಭಾಗವಹಿಸಿದೆ ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಸೋಮವಾರ ಹೇಳಿದ್ದಾರೆ.
ಈ ಸಭೆ ಏರ್ಪಾಡಾದ ಸನ್ನಿವೇಶಗಳು ಮತ್ತು ‘ನ್ಯೂಯಾರ್ಕ್ ಟೈಮ್ಸ್’ ಸೋಮವಾರ ಮಾಡಿರುವ ವರದಿ, ಟ್ರಂಪ್ ಪ್ರಚಾರ ತಂಡ ಮತ್ತು ರಶ್ಯದ ನಡುವಿನ ಸಂಭಾವ್ಯ ಮೈತ್ರಿಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಸಂಭಾವ್ಯ ಮೈತ್ರಿಯ ಬಗ್ಗೆ ಫೆಡರಲ್ ತನಿಖಾ ಸಂಸ್ಥೆಗಳು ಮತ್ತು ಕಾಂಗ್ರೆಸ್ ತನಿಖೆ ನಡೆಸುತ್ತಿವೆ.
ಹಿಲರಿ ಬಗ್ಗೆ ತಾನು ಪಡೆಯಲಿರುವ ಮಾಹಿತಿಯ ಮೂಲ ರಶ್ಯ ಸರಕಾರ ಎಂಬುದಾಗಿ ಟ್ರಂಪ್ ಜೂನಿಯರ್ಗೆ ಸಭೆಯ ಮುನ್ನ ಸಂಗೀತ ಪ್ರಚಾರಕ ರಾಬ್ ಗೋಲ್ಡ್ಸ್ಟೋನ್ ಇಮೇಲ್ ಮೂಲಕ ತಿಳಿಸಿದ್ದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ. ಈ ಇಮೇಲ್ ಬಗ್ಗೆ ಮೂವರು ವ್ಯಕ್ತಿಗಳಿಗೆ ತಿಳಿದಿದೆ ಎಂದು ಪತ್ರಿಕೆ ಹೇಳಿದೆ.
ತನ್ನ ತಂದೆಯ ರಾಜಕೀಯ ಎದುರಾಳಿಯ ಕುರಿತ ಘಾತಕ ಮಾಹಿತಿಯನ್ನು ತಾನು ಪಡೆಯುತ್ತಿದ್ದೇನೆ ಹಾಗೂ ಈ ಮಾಹಿತಿಯನ್ನು ರಶ್ಯ ಸರಕಾರವೇ ನೀಡುತ್ತಿರಬಹುದು ಎಂಬ ವಿಷಯದ ಅರಿವಿದ್ದೇ ಟ್ರಂಪ್ ಪುತ್ರ ಈ ಭೇಟಿಗೆ ಒಪ್ಪಿದ್ದಾರೆ ಎಂದು ಪತ್ರಿಕೆ ಆರೋಪಿಸಿದೆ.
ಪತ್ರಿಕೆಯ ವರದಿಯಲ್ಲಿ ಹುರುಳಿಲ್ಲ ಎಂದು ಟ್ರಂಪ್ ಜೂನಿಯರ್ರ ವಕೀಲ ಅಲನ್ ಫುಟರ್ಫಾಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಹಿಲರಿ ಕುರಿತ ಘಾತಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಭೆಯೊಂದನ್ನು ಏರ್ಪಡಿಸಿದ ಮಾಹಿತಿಯೊಳಗೊಂಡ ಇಮೇಲನ್ನು ಗೋಲ್ಡ್ಸ್ಟೋನ್ರಿಂದ ತನ್ನ ಕಕ್ಷಿದಾರ ಸ್ವೀಕರಿಸಿದ್ದಾರೆ ಎಂಬುದನ್ನು ವಕೀಲ ಒಪ್ಪಿಕೊಂಡಿದ್ದಾರೆ. ಇಮೇಲ್ ಕುರಿತಂತೆ ‘ನ್ಯೂಯಾರ್ಕ್ ಟೈಮ್ಸ್’ನ ವರದಿಯನ್ನು ಅವರ ಹೇಳಿಕೆ ನಿರಾಕರಿಸಿಲ್ಲ.