ಕಾಬೂಲ್: ಕಾರ್ ಬಾಂಬ್ ದಾಳಿಗೆ 24 ಬಲಿ
ಕಾಬೂಲ್,ಜು.24: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಮತ್ತೆ ರಕ್ತದೋಕುಳಿ ಹರಿಸಿದ್ದಾರೆ. ರಾಜಧಾನಿ ಕಾಬೂಲ್ನಲ್ಲಿ ಸೋಮವಾರ ಸರಕಾರಿ ಉದ್ಯೋಗಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭೀಕರ ಕಾರ್ಬಾಂಬ್ ದಾಳಿಯಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಹಾಗೂ 42ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ವಾಹನಸಂಚಾರ ದಟ್ಟಣೆಯ ಸಮಯದಲ್ಲಿ ಗಣಿಗಾರಿಕೆ ಸಚಿವಾಲಯದ ಉದ್ಯೋಗಿಗಳನ್ನು ಒಯ್ಯುತ್ತಿದ್ದ ಬಸ್ಗೆ, ಬಾಂಬ್ಗಳಿಂದ ತುಂಬಿದ್ದ ಕಾರು ಡಿಕ್ಕಿ ಹೊಡೆದಿರುವುದಾಗಿ ಅಫ್ಘಾನ್ ಗೃಹ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಬಂಡುಕೋರರು ದೇಶಾದ್ಯಂತ ದಾಳಿಗಳನ್ನು ತೀವ್ರಗೊಳಿಸಿದ್ದು, ಹಲವಾರು ಜಿಲ್ಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಬೆನ್ನಲ್ಲೇ ಈ ಆತ್ಮಾಹುತಿ ದಾಳಿ ನಡೆದಿದೆ.
Next Story