ಅಫ್ಘಾನ್ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರರ ದಾಳಿ
26 ಸೈನಿಕರು ಹತ; 80ಕ್ಕೂ ಅಧಿಕ ಭಯೋತ್ಪಾದಕರ ಹತ್ಯೆ
ಕಾಬೂಲ್, ಜು. 26: ಕಂದಹಾರ್ ಪ್ರಾಂತದಲ್ಲಿರುವ ಸೇನಾ ನೆಲೆಯೊಂದರ ಮೇಲೆ ತಾಲಿಬಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ 26 ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
ಕಂದಹಾರದ ಖಾಕ್ರೇಝ್ ಜಿಲ್ಲೆಯ ಕರ್ಝಾಲಿ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಮಂಗಳವಾರ ರಾತ್ರಿ ಭಯೋತ್ಪಾದಕರು ದಾಳಿ ನಡೆಸಿದರು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಜನರಲ್ ದೌಲತ್ ವಝೀರಿ ತಿಳಿಸಿದರು.
ಅಫ್ಘಾನ್ ಸೈನಿಕರು ಪ್ರತಿದಾಳಿ ನಡೆಸಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದ್ದು, ಈ ಕಾರ್ಯಾಚರಣೆಯಲ್ಲಿ 80ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದರು.
30ಕ್ಕೂ ಅಧಿಕ ವಾಹನಗಳಲ್ಲಿ ಬಂದ ನೂರಾರು ತಾಲಿಬಾನ್ ಉಗ್ರರು ಎಲ್ಲಾ ದಿಕ್ಕಿನಿಂದಲೂ ಸೇನಾ ನೆಲೆಯ ಮೇಲೆ ಆಕ್ರಮಣ ಮಾಡಿದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
Next Story