ಶನಿ ಉಪಗ್ರಹ ‘ಟೈಟಾನ್’ನಲ್ಲಿ ರೂಪುಗೊಳ್ಳುತ್ತಿರುವ ಜೀವ?
ಲಂಡನ್, ಜು. 28: ಶನಿ ಗ್ರಹದ ಅತಿ ದೊಡ್ಡ ಉಪಗ್ರಹ ಟೈಟಾನ್ ಧೂಮಯುಕ್ತ ಮೇಲಿನ ವಾತಾವರಣದಲ್ಲಿ ಜೀವಕ್ಕೆ ಪೂರಕವಾದ ಮಹತ್ವದ ಪರಿಸರ ಇರುವುದನ್ನು ಭಾರತ ಮೂಲದ ಸಂಶೋಧಕರೊಬ್ಬರ ನೇತೃತ್ವದ ತಂಡವೊಂದು ಪತ್ತೆಹಚ್ಚಿದೆ.
‘ಕ್ಯಾಸಿನಿ’ ಬಾಹ್ಯಾಕಾಶ ನೌಕೆ ಕಳುಹಿಸಿದ ಮಾಹಿತಿಗಳ ಅಧ್ಯಯನ ನಡೆಸಿದ ವಿಜ್ಞಾನಿಗಳು, ‘ಟೈಟಾನ್’ನ ವಾತಾವರಣದಲ್ಲಿ ‘ಕಾರ್ಬನ್ ಚೇನ್ ಆ್ಯನಿಯನ್ಸ್’ ಎಂದು ಕರೆಯಲ್ಪಡುವ ಋಣ ವಿದ್ಯುದಾವೇಶ (ನೆಗೆಟಿವ್ಲಿ ಚಾರ್ಜ್ಡ್)ದ ಕಣಗಳನ್ನು ಗುರುತಿಸಿದ್ದಾರೆ.
ಈ ಸರಳ ಕಣಗಳು ಹೆಚ್ಚು ಸಂಕೀರ್ಣ ಕಣಗಳ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ನಂಬಲಾಗಿದೆ. ಇದೇ ಕಣಗಳು ಭೂಮಿಯಲ್ಲಿ ಅನಾದಿ ಕಾಲದ ಜೀವ ಮಾದರಿಗಳ ಮೂಲವಾಗಿರಬಹುದು ಎನ್ನಲಾಗಿದೆ.
ಋಣ ವಿದ್ಯುದಾವೇಶದ ಕಾರ್ಬನ್ ಚೇನ್ ಆ್ಯನಿಯನ್ ಕಣಗಳು ಪತ್ತೆಯಾಗಿರುವುದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಯಾಕೆಂದರೆ, ಅವುಗಳು ಅತ್ಯಂತ ಪ್ರತಿಕ್ರಿಯಾತ್ಮಕ ಕಣಗಳಾಗಿವೆ ಹಾಗೂ ಟೈಟಾನ್ನ ವಾತಾವರಣದಲ್ಲಿ ಹೆಚ್ಚು ಸಮಯ ಇರದೆ ಇತರ ಪದಾರ್ಥಗಳೊಂದಿಗೆ ಬೆರೆಯುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.
ಬ್ರಿಟನ್ನ ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್)ನ ಪಿಎಚ್ಡಿ ವಿದ್ಯಾರ್ಥಿಯಾಗಿರುವ ರವಿ ದೇಸಾಯಿ ನೇತೃತ್ವದ ವಿಜ್ಞಾನಿಗಳ ತಂಡವೊಂದು ಇದನ್ನು ಪತ್ತೆಹಚ್ಚಿದೆ.