ಚೀನಾ: ಮತ್ತೆ ಹಳಿಗಿಳಿಯುವ ಅತಿ ವೇಗದ ರೈಲುಗಳು
ಬೀಜಿಂಗ್, ಆ. 21: ಗಂಟೆಗೆ 350 ಕಿ.ಮೀ. ವೇಗದಲ್ಲಿ ಓಡುವ ಜಗತ್ತಿನ ಅತಿ ವೇಗದ ಬುಲೆಟ್ ರೈಲುಗಳನ್ನು ಚೀನಾ ಮತ್ತೆ ಓಡಿಸಲಿದೆ.
ಈ ರೈಲುಗಳು ಬೀಜಿಂಗ್ ಮತ್ತು ಶಾಂೈ ನಡುವಿನ ಮಾರ್ಗದಲ್ಲಿ ಮುಂದಿನ ತಿಂಗಳ ಆರಂಭದಲ್ಲಿ ಓಡಲಿವೆ. ಈ ಎರಡು ನಗರಗಳ ನಡುವಿನ 1,250 ಕಿ.ಮೀ. ಅಂತರವನ್ನು ಬುಲೆಟ್ ರೈಲುಗಳು ಕೇವಲ 4 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿವೆ.
ಈ ರೈಲುಗಳನ್ನು ಇತರ ಮಾರ್ಗಗಳಲ್ಲಿ ಓಡಿಸಲೂ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಗಂಟೆಗೆ 350 ಕಿ.ಮೀ. ವೇಗದಲ್ಲಿ ಓಡುವ ರೈಲುಗಳನ್ನು ಚೀನಾ ಮೊದಲು 2008 ಆಗಸ್ಟ್ನಲ್ಲಿ ಪರಿಚಯಿಸಿತ್ತು. ಆದರೆ, ವೆಂಝೂ ನಗರದ ಸಮೀಪ ಎರಡು ರೈಲುಗಳು ಢಿಕ್ಕಿಯಾದ ಬಳಿಕ 2011ರಲ್ಲಿ ವೇಗವನ್ನು 250-300 ಕಿ.ಮೀ.ಗೆ ತಗ್ಗಿಸಿತು. ಆ ಅಪಘಾತದಲ್ಲಿ 40 ಮಂದಿ ಮೃತಪಟ್ಟರು ಹಾಗೂ 191 ಮಂದಿ ಗಾಯಗೊಂಡರು.
ಚೀನಾ 20,000 ಕಿ.ಮೀ. ಉದ್ದದ ಅಧಿಕ ವೇಗದ ಹಳಿಗಳನ್ನು ಈಗಾಗಲೇ ನಿರ್ಮಿಸಿದೆ ಹಾಗೂ 2020ರ ವೇಳೆಗೆ ಇನ್ನೂ 10,000 ಕಿ.ಮೀ. ಉದ್ದದ ಅಧಿಕ ವೇಗದ ಹಳಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಚೀನಾ ಅಧಿಕ ವೇಗದ ರೈಲು ಹಳಿಗಳಿಗೆ 360 ಬಿಲಿಯ ಡಾಲರ್ (23.10 ಲಕ್ಷ ಕೋಟಿ ರೂಪಾಯಿ) ವೆಚ್ಚ ಮಾಡಿದೆ.