ಮೋದಿ ಹೆಸರಿನಲ್ಲಿಯೇ 3 ಟ್ವಿಟ್ಟರ್ ಖಾತೆ ಇದೆ: ರಮ್ಯಾ
"ಜಗ್ಗೇಶ್ ದೊಡ್ಡವರು, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ"
ಬೆಂಗಳೂರು, ಫೆ.8: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ಮೂರು ಟ್ವಿಟ್ಟರ್ ಖಾತೆಗಳಿವೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಹೇಳಿದರು.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಸಾಮಾಜಿಕ ಜಾಲತಾಣ ಬಳಕೆ ಕುರಿತು ನಡೆದ ಸಭೆಯಲ್ಲಿ ನಾನು ಎಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವ ಬಗ್ಗೆ ಹೇಳಿಲ್ಲ. ಆದರೆ, ಬಿಜೆಪಿಯವರು ನಾನು ಆಡಿರುವ ಮಾತನ್ನು ತಮಗೆಷ್ಟು ಬೇಕೋ ಅಷ್ಟನ್ನು ಎಡಿಟ್ ಮಾಡಿ ಆ ವಿಡಿಯೊವನ್ನು ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ವೈಯಕ್ತಿಕವಾಗಿ ಒಂದು ಖಾತೆ ಮತ್ತು ಪಕ್ಷದ ಚಟುವಟಿಕೆಗಳಿಗೆ ಇನ್ನೊಂದು ಖಾತೆಯನ್ನು ತೆರೆಯಲು ನಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದ್ದೆ. ವೈಯಕ್ತಿಕವೇ ಬೇರೆ, ಸಾಮಾಜಿಕವೇ ಬೇರೆ. ಎಲ್ಲಿಯೂ ನಕಲಿ ಖಾತೆ ಆರಂಭಿಸುವ ಬಗ್ಗೆ ಹೇಳಿಲ್ಲ. ಅದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ಮೂರು ಟ್ವಿಟ್ಟರ್ ಖಾತೆಗಳಿದ್ದು, ಒಂದನ್ನು ಮಾತ್ರ ಅವರು ಬಳಕೆ ಮಾಡುತ್ತಾರೆ ಎಂದು ಉದಾಹರಣೆ ನೀಡಿದರು.
ಬಿಜೆಪಿ ಮುಖಂಡ ಜಗ್ಗೇಶ್ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ. ಅವರೆಲ್ಲಾ ದೊಡ್ಡವರು, ಇನ್ನು ಬಿಜೆಪಿ ತನ್ನ ಮೇಲೆ ದೂರು ನೀಡಿರುವ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ರಮ್ಯಾ ಹೇಳಿದರು.