ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: 1.90 ಕೋಟಿ ರೂ.ನಗದು, 13.24 ಕೋಟಿ ಮೌಲ್ಯದ ಮದ್ಯ ವಶ
ಬೆಂಗಳೂರು, ಎ.21: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಳೆದ 24 ಗಂಟೆಯಲ್ಲಿ 1.90 ಕೋಟಿ ರೂ.ನಗದು, 13.24ಕೋಟಿ ರೂ. ಮೌಲ್ಯದ ಮದ್ಯ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಫ್ಲೈಯಿಂಗ್ ಸ್ಕ್ವಾಡ್ಗಳ ತಂಡ ಯಶಸ್ವಿಯಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ತಿಳಿಸಿದರು.
ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಪಡಿಸಿಕೊಂಡಿರುವುದರಲ್ಲಿ 1222 ಸೀರೆಗಳು, ಎಸ್ಬಿಬಿಎಲ್ ಗನ್, 1.70 ಕೋಟಿ ರೂ. ವೌಲ್ಯದ 7ಕೆಜಿ ಚಿನ್ನ, 11ಲಕ್ಷ ರೂ. ಮೌಲ್ಯದ ಬೆಳ್ಳಿ, 160 ಲ್ಯಾಪ್ಟಾಪ್ ಹಾಗೂ 80 ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆ ಕಳೆದ 24ಗಂಟೆಯಲ್ಲಿ 1.75 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು, 77ಪ್ರಕರಣಗಳನ್ನು ದಾಖಲಿಸಿದೆ. ಹಾಗೂ 84 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. 684 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 1060 ಜಾಮೀನು ರಹಿತ ವಾರೆಂಟ್ಗಳನ್ನು ಹೊರಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.