ವಿದ್ವತ್ ಮೇಲಿನ ಹಲ್ಲೆ ಪ್ರಕರಣ: ಜಾಮೀನು ಅರ್ಜಿಯ ವಿಚಾರಣೆ ಪೂರ್ಣ
ಬೆಂಗಳೂರು, ಮೇ 29: ಮುಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪನ್ನು ಬುಧವಾರ ಪ್ರಕಟಿಸಲಿದೆ.
ಫೆಬ್ರವರಿಯಿಂದ ಮುಹಮ್ಮದ್ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಂಗಳವಾರ ಮುಹಮ್ಮದ್ ನಲಪಾಡ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ವಿಶೇಷ ಸರಕಾರಿ ಅಭಿಯೋಜಕ ಶ್ಯಾಂ ಸುಂದರ್ ವಾದ ಮಂಡನೆ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಬುಧವಾರಕ್ಕೆ ತೀರ್ಪು ಕಾಯ್ದಿರಿಸಿದರು.
ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಫೆ.17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದಲ್ಲಿ ಮುಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಆರೋಪಿಗಳು. ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿದ್ವತ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದಾರೆ. 600 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಮುಹಮ್ಮದ್ ನಲಪಾಡ್, ಅರುಣ್ ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಆರೋಪಿಗಳಾಗಿದ್ದಾರೆ.