ಅನಾಥ ಮಗುವಿಗೆ ಎದೆಹಾಲುಣಿಸಿದ ಮಹಿಳಾ ಪೊಲೀಸ್
ಬೆಂಗಳೂರು, ಜೂ. 8: ಅನಾಥವಾಗಿ ಬಿಟ್ಟುಹೋಗಿದ್ದ ನವಜಾತ ಶಿಶುವಿಗೆ ಮೊಲೆ ಹಾಲುಣಿಸಿದ ಮಹಿಳಾ ಪೊಲೀಸ್, ಮಗುವಿನ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆ ನಡೆದಿದೆ.
ಡಿ.ಎಸ್.ಅರ್ಚನಾ ಎಂಬ ಮಹಿಳಾ ಪೊಲೀಸ್ ಈ ಮಹಾತಾಯಿ. ಜೂನ್ ಒಂದರಂದು ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಅನಾಥ ನವಜಾತ ಶಿಶುವನ್ನು ಪೊಲೀಸರು ಪತ್ತೆ ಮಾಡಿದ್ದರು. ಐದು ತಿಂಗಳ ಗಂಡು ಮಗು ಆಶಿತ್ಗೆ ಮೊಲೆ ಹಾಲುಣಿಸುವ ರೀತಿಯಲ್ಲೇ ಈ ಅನಾಥ ಮಗುವಿಗೂ ಮೊಲೆ ಹಾಲುಣಿಸಿ ಬದುಕಿಸಿ ಮಾನವೀಯತೆ ಮೆರೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚನಾ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸರಿಗೆ ಮಗು ಸಿಕ್ಕಿದಾಗ ತೀರಾ ದುರ್ಬಲ ಸ್ಥಿತಿಯಲ್ಲಿತ್ತು. ಇತರ ಪೊಲೀಸರ ನೆರವಿನೊಂದಿಗೆ ಮಹಿಳಾ ಪೊಲೀಸ್ನ ಸಕಾಲಿಕ ಮಧ್ಯಪ್ರವೇಶದಿಂದಾಗಿ ಮಗುವಿನ ಜೀವ ಉಳಿಸುವುದು ಸಾಧ್ಯವಾಯಿತು.
ತೀರಾ ಕೃಶವಾಗಿದ್ದು, ಆಘಾತಕಾರಿ ಸ್ಥಿತಿಯಲ್ಲಿದ್ದ ಮಗು ಅಳಲು ಆರಂಭಿಸಿದಾಗ ಯಾವ ಯೋಚನೆಯನ್ನೂ ಮಾಡದೇ ತಕ್ಷಣ ಮಗುವಿಗೆ ಹಾಲುಣಿಸಿ, ಮಗು ಸ್ಥಿರ ಸ್ಥಿತಿಗೆ ಬಂದ ಬಳಿಕ ತುರ್ತು ಚಿಕಿತ್ಸೆಗೆ ದಾಖಲಿಸಿದರು. ಈ ನಿಸ್ವಾರ್ಥ ಸೇವೆಯನ್ನು ಮೇಲಧಿಕಾರಿಗಳಷ್ಟೇ ಅಲ್ಲದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಶ್ಲಾಘಿಸಿದ್ದಾರೆ. ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಶಿಶುವನ್ನು ಕಟ್ಟಡದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಐದು ತಿಂಗಳ ಗಂಡು ಮಗುವಿನ ತಾಯಿಯಾಗಿರುವ ಅರ್ಚನಾ, ಹದಿನೈದು ದಿನ ಹಿಂದಷ್ಟೇ ಹೆರಿಗೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.