ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ
ಬೆಂಗಳೂರು, ಸೆ.4: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಕಳೆದ ಆರು ತಿಂಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುವ ಮೂಲಕ ಆತಂಕವನ್ನು ಸೃಷ್ಟಿಸಿದೆ.
ನಗರದಲ್ಲಿ ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದ ಎಫ್ಐಆರ್ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ ಆರು ತಿಂಗಳಲ್ಲಿ ನಗರದ ವಿವಿಧ ಕಡೆ 2908 ಎಫ್ಐಆರ್, 2572 ಎನ್ಸಿಆರ್ಗಳು ದಾಖಲಾಗಿವೆ. ವಿದ್ಯಾವಂತರೇ ಹೆಚ್ಚು ಕ್ರೈಮ್ ವಂಚಕರಿಗೆ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
ಯಾವೆಲ್ಲಾ ಪ್ರಕರಣ ದಾಖಲಾಗಿದೆ?: ಒಟಿಪಿ ನಂಬರ್ ವಂಚನೆ, ಎಟಿಎಂ ಸ್ಕೀಮಿಂಗ್, ಓಎಲ್ಎಕ್ಸ್, ಆನ್ಲೈನ್ ಜಾಬ್ ವಂಚಕ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಅತ್ಯಾಧುನಿಕ ಆಂಡ್ರಾಯ್ಡ್ ಫೋನ್ ಬಳಕೆದಾರರು ಹೆಚ್ಚು ಸುಲಭವಾಗಿ ಹ್ಯಾಕರ್ಗಳ ಬಲೆಗೆ ಬೀಳುತ್ತಿದ್ದಾರೆ.
ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದರೂ ತನಿಖೆ ಮಾತ್ರ ಕುಂಟುತ್ತಾ ಸಾಗಿದೆ. ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಸ್ಟೇಷನ್ ಇದ್ದರೂ ಪ್ರಯೋಜನವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಸಿಬ್ಬಂದಿ ಕೊರತೆಯಿಂದಾಗಿ ಪ್ರಕರಣಗಳ ತನಿಖೆ ತಡವಾಗುತ್ತಿದೆ ಎಂದು ಸೈಬರ್ ಇಲಾಖೆ ಹೇಳುತ್ತಿದೆ.