ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಬೆಂಗಳೂರು, ಅ.9: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ನಗರದ ಮಾರತ್ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಮಾರತ್ಹಳ್ಳಿಯ ನಿವಾಸಿ ಚಂದ್ರಬಾಬು (52) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಚಂದ್ರಬಾಬು ಮಾರತ್ಹಳ್ಳಿಯ ದೇವರಬೀಸನಹಳ್ಳಿ ಬಳಿ ಶೆಡ್ನಲ್ಲಿ ಓಂಟಿಯಾಗಿ ವಾಸಿಸುತ್ತಿದ್ದ. ಸಂತ್ರಸ್ತ ಮಗುವಿನ ಪಾಲಕರು ಮನೆಗೆಲಸ ಮಾಡುತ್ತಿದ್ದು, ಆರೋಪಿ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದು, ಮಧ್ಯಾಹ್ನ ಮಗುವನ್ನು ಮನೆಯಲ್ಲೇ ಬಿಟ್ಟು ದಂಪತಿ ಮನೆ ಕೆಲಸಕ್ಕೆ ತೆರಳಿದ್ದರು. ಶೆಡ್ನಲ್ಲಿದ್ದ ಆರೋಪಿ ಚಂದ್ರಬಾಬು ಮನೆ ಪಕ್ಕದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸಿದ್ದ. ಆ ಮಗುವನ್ನು ಮನೆಗೆ ಕರೆ ತಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದ್ದು, ಬಳಿಕ ಮಗು ಚಂದ್ರಬಾಬು ಮನೆಯಿಂದ ಅಳುತ್ತಾ ಬರುತ್ತಿರುವುದನ್ನು ಕಂಡ ಸ್ಥಳೀಯರು ಈ ಬಗ್ಗೆ ಮಗುವಿನ ಬಳಿ ಪ್ರಶ್ನಿಸಿದಾಗ ಮಗು ನಡೆದ ಕೃತ್ಯವನ್ನು ಹೇಳಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ಆರೋಪಿಯನ್ನು ಹಿಡಿದು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎನ್ನಲಾಗಿದೆ.