ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಗಳಿಗೆ 200 ಕೋಟಿ ರೂ.ಬಿಡುಗಡೆ: ಅನುದಾನ ಬಳಕೆ ವರದಿ ನೀಡಲು ಸಿಎಂ ಸೂಚನೆ
ಬೆಂಗಳೂರು, ನ.27: ರಾಜ್ಯದಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಗಳಿಗೆ ಬಿಡುಗಡೆಯಾದ ಪರಿಹಾರದ 200 ಕೊಟಿ ರೂ.ಮೊತ್ತವನ್ನು ಯಾವ ಕೆಲಸಗಳಿಗೆ ಬಳಕೆಯಾಗಿದೆ ಎಂದು ಒಂದು ವಾರದೊಳಗೆ ವರದಿ ನಿಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
200 ಕೊಟಿ ರೂ.ಗಳ ಪರಿಹಾರ ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ 79 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 92 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ 16 ಕೋಟಿ ರೂ., ಸಣ್ಣ ನಿರಾವರಿ ಇಲಾಖೆಗೆ 6.91 ಕೋಟಿ ರೂ. ಹಾಗೂ ಇಂಧನ ಇಲಾಖೆಗೆ 5.21 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ಸೂಚನೆ ನೀಡಲಾಗಿದೆ. ವಸತಿ ಇಲಾಖೆಯ ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್, ಡಾ.ಬಿ.ಆರ್.ಅಂಬೇಡ್ಕರ್, ವಾಜಪೇಯಿ ನಗರ ವಸತಿ ಯೊಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿಗೆ ಲಭ್ಯವಿರುವ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವೇತನ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. 950 ಕೋಟಿ ರೂ.ಗಳ ಅನುದಾನವನ್ನು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬಿಡುಗಡೆ ಮಡಲಾಗಿದೆ. ಇದಲ್ಲದೆ, 450 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಮೊತ್ತವನ್ನು ಲೋಕೋಪಯೋಗಿ ಇಲಾಖೆ ಖಾತೆಗೆ ಜಮಾ ಮಾಡಿ, ಕಾಮಗಾರಿ ಕೈಗೊಳ್ಳಲು ಅನುವು ಮಾಡಿಕೊಡಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಆಡಳಿತದಲ್ಲಿ ಸುಧಾರಣೆ ತರಲು, ಒಂದೇ ಗ್ರಾಮದಲ್ಲಿ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ರುವ ಶಾಲೆಗಳ ಸಮೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಕೈಗಾರಿಕಾ ಕ್ಲಸ್ಟರ್ ಗಳಿಗೆ ಅಗತ್ಯವಾದ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಉದ್ಯೋಗ ಕಲ್ಪಿಸುವ ಈ ಯೋಜನೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮರಳು ಹಾಗೂ ಗಣಿಗಾರಿಕೆಗೆ ಸಂಬಂಧಿಸಿದಂತೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒರುವ ಸಮಸ್ಯೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.