ಬೆಂಗಳೂರು: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ
ತಡವಾಗಿ ಬೆಳಕಿಗೆ ಬಂದ ಕೃತ್ಯ
ಬೆಂಗಳೂರು, ಡಿ.12: ತಂದೆಯೊಬ್ಬ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವಂತಹ ಅಮಾನವೀಯ ಘಟನೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಗುವಿನ ತಾಯಿ ಕೆಲಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ತಂದೆ ಆಟೋ ಚಾಲಕ ಸಯ್ಯದ್, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಗಳನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದು, ಅಲ್ಲದೆ, ಈ ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಆರೋಪಿಸಿ ಮಗುವಿನ ತಾಯಿ ದೂರಿನಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ತಂದೆ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡತೊಡಗಿದ್ದು, ಇದರಿಂದ ಬೇಸತ್ತ ಬಾಲಕಿ, ತಂದೆಯ ಹೀನ ಕೃತ್ಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ನಂತರ, ತಾಯಿಯು ಮಗಳನ್ನು ಮಾತ್ರ ಮನೆಯಲ್ಲಿ ಬಿಟ್ಟು ಹೊರ ಹೋಗಿದ್ದಾಳೆ. ಮನೆಯಲ್ಲಿ ತನ್ನ ಹೆಂಡತಿಯಿಲ್ಲದಿರುವುದನ್ನು ಗಮನಿಸಿದ ಪಾಪಿ ತಂದೆ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದು, ಈ ವೇಳೆ ಮನೆಗೆ ಬಂದ ಹೆಂಡತಿಗೆ ಆರೋಪಿ ಪತಿ ಸಯ್ಯದ್ನ ಹೀನ ಕೃತ್ಯ ಬಯಲಾಗಿದೆ ಎನ್ನಲಾಗಿದೆ.
ಆರೋಪಿ, ಪಾಪಿ ತಂದೆ ಸಯ್ಯದ್ ಕೃತ್ಯದ ಬಳಿಕ ಪರಾರಿಯಾಗಿದ್ದಾನೆ. ಈ ಕುರಿತು ಬಾಲಕಿಯ ತಾಯಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ವಿರುದ್ಧ ಐಪಿಎಸ್ ಸೆಕ್ಷನ್ 506, 376, 511 ಹಾಗೂ ಫೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.