ಫೇಸ್ಬುಕ್ ಸ್ನೇಹ, ಸಲುಗೆಯಾಗುವ ಮುನ್ನ ಇದನ್ನು ಓದಿ...
ಬೆಂಗಳೂರು, ಫೆ. 12: ಫೇಸ್ಬುಕ್ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 24 ವರ್ಷ ವಯಸ್ಸಿನ ಎಂಬಿಎ ವಿದ್ಯಾರ್ಥಿನಿಯೊಬ್ಬಳ ಮೇಲೆ ಸ್ನೇಹಿತನ ಫ್ಲ್ಯಾಟ್ನಲ್ಲಿ ಸಹವಾಸ ಮಾಡುತ್ತಿದ್ದ ಟೆಕ್ಕಿ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಎಚ್ಎಎಲ್ ಬಳಿ ಈ ಘಟನೆ ನಡೆದಿದ್ದು, ಆರೋಪಿ ಆದಿತ್ಯನನ್ನು ಎಚ್ಎಎಲ್ ಸಮೀಪದ ದೊಡ್ಡನೆಕ್ಕುಂದಿಯ ನಿವಾಸಿ ಎಂದು ಗುರುತಿಸಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲಿನವನಾಗಿದ್ದು, ಮಾರತ್ಹಳ್ಳಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದಿತ್ಯ ತನ್ನ ಸ್ನೇಹಿತ ಆರೀಫ್ ಎಂಬಾತನ ಜತೆಗೆ ಫ್ಲ್ಯಾಟ್ನಲ್ಲಿ ವಾಸವಿದ್ದ ಎನ್ನಲಾಗಿದೆ. ಆರೀಫ್ ಶನಿವಾರ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಕೆಲ ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಸ್ನೇಹಿತೆಯಾದ ಎಂಬಿಎ ವಿದ್ಯಾರ್ಥಿನಿಯನ್ನು ಆರೀಫ್ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದ. ಆರೀಫ್ ಹಾಗೂ ಎಂಬಿಎ ವಿದ್ಯಾರ್ಥಿನಿ ಕೂಡಾ ಆಂಧ್ರ ಮೂಲದವರು. ಮೂವರೂ ಪಾರ್ಟಿಯಲ್ಲಿ ಮದ್ಯ ಸೇವನೆ ಮಾಡಿದ್ದು, ಇದಾದ ಬಳಿಕ ವಿದ್ಯಾರ್ಥಿನಿ ಸ್ವಲ್ಪಕಾಲ ವಿಶ್ರಾಂತಿ ಪಡೆಯಲು ಬೆಡ್ರೂಂಗೆ ತೆರಳಿದ್ದಳು. ಸ್ನೇಹಿತರಿಗೆ ತಿನಸುಗಳನ್ನು ತರುವ ಸಲುವಾಗಿ ಆರೀಫ್ ಹೊರಗೆ ಹೋಗಿದ್ದ.
ತಾನು ಹಾಗೂ ವಿದ್ಯಾರ್ಥಿನಿ ಮಾತ್ರ ಫ್ಲ್ಯಾಟ್ನಲ್ಲಿರುವುದನ್ನು ಖಚಿತಪಡಿಸಿಕೊಂಡ ಆರೋಪಿ ಕೊಠಡಿಯೊಳಕ್ಕೆ ತೆರಳಿ ಅತ್ಯಾಚಾರ ಎಸಗಿದ ಎಂದು ಪೊಲೀಸರು ಹೇಳಿದ್ದಾರೆ.
ಆರೀಫ್ ವಾಪಾಸು ಬಂದಾಗ ವಿದ್ಯಾರ್ಥಿನಿ, ಘಟನೆಯನ್ನು ವಿವರಿಸಿದಳು. ವಿದ್ಯಾರ್ಥಿನಿ ರವಿವಾರ ಮುಂಜಾನೆ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದಳು. ಈ ಘಟನೆ ನಡೆದಾಗ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ಆದಿತ್ಯ ಹೇಳಿಕೊಂಡಿದ್ದಾನೆ.
ಆರೀಫ್ನನ್ನು ಕೂಡಾ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದು, ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಇಬ್ಬರೂ ಸ್ನೇಹ ಬೆಳೆಸಿದ್ದು, ಹಲವು ಬಾರಿ ಭೇಟಿಯಾಗಿದ್ದೇವೆ ಎಂದು ಆರೀಫ್ ಹೇಳಿದ್ದಾನೆ. ಆರೀಫ್ ಮೂಲಕ ಆದಿತ್ಯ ಕೂಡಾ ಆಕೆಯ ಸ್ನೇಹ ಸಂಪಾದಿಸಿದ್ದ ಎಂದು ಹೇಳಲಾಗಿದೆ.