ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ
ಬೆಂಗಳೂರು, ಎ.12: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಎ.15ರಂದು(ಸೋಮವಾರ) ಪ್ರಕಟವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.
ಈ ಹಿಂದೆ ಮಾಧ್ಯಮಗಳಲ್ಲಿ ಎ.17ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಪ್ಪು ಮಾಹಿತಿ ಪ್ರಕಟವಾಗಿತ್ತು. ಮೌಲ್ಯಮಾಪನದ ಬಳಿಕ ಅಂಕಗಳನ್ನು ಆನ್ಲೈನ್ ಮೂಲಕ ಸರ್ವರ್ಗೆ ಸೇರಿಸುವ ಕ್ರಮದಿಂದಾಗಿ ಈ ಬಾರಿ ಫಲಿತಾಂಶವನ್ನು ಬೇಗವಾಗಿ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಎ.29 ಮತ್ತು ಮೇ 1ರವರೆಗೆ ಸಿಇಟಿ ಪರೀಕ್ಷೆ ನಡೆಯುವುದರಿಂದ ಅದಕ್ಕೂ ಮುನ್ನವೇ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುತ್ತಿರುವುದು ವಿಶೇಷವಾಗಿದೆ. 2019 ಶೈಕ್ಷಣಿಕ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಹಾಗೂ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ.
Next Story