ಐಪಿಎಲ್ ಬೆಟ್ಟಿಂಗ್: ಆರೋಪಿ ಸೆರೆ, 70.33 ಲಕ್ಷ ರೂ. ನಗದು ವಶ
ಬೆಂಗಳೂರು, ಮೇ 18: ಐಪಿಎಲ್ ಕ್ರಿಕೆಟ್ ಪೈನಲ್ ಪಂದ್ಯಾಟ ಹಿನ್ನೆಲೆಯಲ್ಲಿ ಬೆಟ್ಟಿಂಗ್ ದಂಧೆ ಆರೋಪದ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, 70.33 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಟ್ಯಾನರಿ ರಸ್ತೆ ಪಿಳ್ಳಣ್ಣ ಗಾರ್ಡನ್ನ ಚಾಂದ್ ಪಾಷಾ (25) ಎಂದು ಗುರುತಿಸಲಾಗಿದೆ. ಆರೋಪಿಯು ಮೇ 12ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಮೇಲೆ ಮೊಬೈಲ್ ಫೋನ್ ಮೂಲಕ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ. ಈ ಬಗ್ಗೆ ಖಚಿತ ಮಾಹಿತಿಗೆ ಆಧರಿಸಿ ದಾಳಿ ನಡೆಸಿ ಪಣಕ್ಕೆ ಕಟ್ಟಿದ್ದ ಹಣ, ಎರಡು ಮೊಬೈಲ್ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿ ಬುಕ್ಕಿ ಸೈಯದ್ ಇಲಿಯಾಸ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story