ಪತ್ನಿ, ಇಬ್ಬರು ಮಕ್ಕಳ ಕತ್ತು ಸೀಳಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್
ಗುರ್ಗಾಂವ್ : ಗುರ್ಗಾಂವ್ ನಿವಾಸಿ ಕೆಮಿಕಲ್ ಇಂಜಿನಿಯರ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಕತ್ತು ಸೀಳಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ರಾತ್ರಿ ನಡೆದಿದೆ.
ಪ್ರಕಾಶ್ ಸಿಂಗ್ (55) ಎಂಬಾತ ತನ್ನ ಪತ್ನಿ, 22 ವರ್ಷದ ಪುತ್ರಿ ಹಾಗೂ 13 ವರ್ಷದ ಪುತ್ರ ಮಲಗಿದ್ದ ವೇಳೆ ಈ ಕೃತ್ಯ ನಡೆಸಿ ನಂತರ ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.
ಸೋಮವಾರ ಇಂಜಿನಿಯರ್ ಕುಟುಂಬದ ಯಾರೊಬ್ಬರೂ ಮನೆಯ ಹೊರಗೆ ಬರದೇ ಇದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲೊಡೆದು ಒಳ ಪ್ರವೇಶಿಸಿದಾಗ ನಾಲ್ಕು ಮಂದಿಯೂ ನೆಲದಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿತು.
ಪಿಎಚ್ಡಿ ಪದವಿ ಹೊಂದಿದ್ದ ಪ್ರಕಾಶ್ ಸಿಂಗ್ ಹೈದರಾಬಾದ್ ಮೂಲದ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಗುರ್ಗಾಂವ್ನಲ್ಲಿ ಕಳೆದ ಎಂಟು ವರ್ಷಗಳಿಂದ ಆತನ ಕುಟುಂಬ ವಾಸಿಸುತ್ತಿತ್ತು. ಆತನ ಪತ್ನಿ ನಗರದಲ್ಲಿ ತನ್ನದೇ ಸ್ವಂತ ಶಾಲೆ ನಡೆಸುತ್ತಿದ್ದರು.
ಪ್ರಕಾಶ್ ಸಿಂಗ್ ಬರೆದಿದ್ದಾನೆನ್ನಲಾದ ಒಂದು ಚೀಟಿ ಮನೆಯಲ್ಲಿ ಪತ್ತೆಯಾಗಿದ್ದು ಅದರಲ್ಲಿ ಆತ ''ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ'' ಎಂದು ಬರೆದಿರುವುದಾಗಿ ತಿಳಿದುಬಂದಿದೆ.