ಕೊಲೆ ಪ್ರಕರಣ: ಆರೋಪಿಗಳಿಗೆ ಗುಂಡೇಟು
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.8: ಕೊಲೆ ಪ್ರಕರಣ ಸಂಬಂಧ ಆರೋಪಿಗಳಿಬ್ಬರ ಕಾಲಿಗೆ ಪಿಸ್ತೂಲಿನಿಂದು ಗುಂಡು ಹಾರಿಸಿ, ಬಂಧಿಸುವಲ್ಲಿ ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ಪ್ರವೀಣಾ ಹಾಗೂ ಅಂದ್ರಹಳ್ಳಿ ಅಭಿ ಎನ್ನುವರು ಗುಂಡೇಟಿನಿಂದ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಶ್ ಕುಮಾರ್ ಎಂಬಾತನನ್ನು ಶನಿವಾರ ರಾತ್ರಿ ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ಈ ಸಂಬಂಧ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ರವಿವಾರ ಮುಂಜಾನೆ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆಯುವ ವೇಳೆ ಆರೋಪಿಗಳು, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಯಾಗಿರುವ ಮಹೇಶ್ ಕುಮಾರ್, ಈ ಹಿಂದೆ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಹಳೇ ದ್ವೇಷದ ಹಿನ್ನಲೆ ಕೊಲೆಗೈದಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.