ಬ್ಯಾಂಕ್ ಕಟ್ಟಡದಲ್ಲಿ ಬೆಂಕಿ: ತಪ್ಪಿದ ಭಾರೀ ಅನಾಹುತ
ಬೆಂಗಳೂರು, ಸೆ.18: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಯುಕೊ ಬ್ಯಾಂಕ್ ಕಟ್ಟಡದಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಅಗ್ನಿ ಶಾಮಕ ದಳದ ಆಗಮನದಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಯುಕೋ ಬ್ಯಾಂಕ್ ಕಟ್ಟಡ ಎರಡನೇ ಮಹಡಿಯಲ್ಲಿ ಅಗ್ನಿ ಕಾಣಿಸಿಕೊಂಡಿತು. ಇದನ್ನು ಕಂಡ ಸಿಬ್ಬಂದಿ ಹಾಗೂ ನಾಗರಿಕರು ಭಯಭೀತರಾಗಿ ಕೆಳಗಿಳಿಯಲು ಮುಂದಾದರು. ಮೂರು, ನಾಲ್ಕನೇ ಮಹಡಿಯಲ್ಲಿದ್ದವರು ಮೇಲಿನ ಮಹಡಿಗೆ ತೆರಳಿ ರಕ್ಷಿಸಲು ಮೊರೆ ಇಟ್ಟರು. ಬಳಿಕ ಏಣಿಗಳ ಮೂಲಕ ಸಿಬ್ಬಂದಿಯನ್ನು ರಕ್ಷಿಸಲಾಯಿತು.
ಕಟ್ಟಡದ ಲಿಫ್ಟ್ನ ಪವರ್ ಯೂನಿಟ್ನಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆರು ಅಂತಸ್ತಿನ ಈ ಕಟ್ಟಡದಲ್ಲಿ ನೆಲ ಮಾಳಿಗೆ ಸೇರಿ ಎರಡು ಅಂತಸ್ತಿನಲ್ಲಿ ಬ್ಯಾಂಕ್ ಇದೆ. ಮೂರನೇ ಮಹಡಿಯಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಇದೆ. 120 ವಿದ್ಯಾರ್ಥಿಗಳು ಹಾಗೂ ಸಾಕಷ್ಟು ಮಂದಿ ಬ್ಯಾಂಕ್ ಸಿಬ್ಬಂದಿ ಈ ಕಟ್ಟಡದಲ್ಲಿದ್ದರು ಎನ್ನಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪವರ್ ಯೂನಿಟ್ ಬಂದ್ ಮಾಡಲಾಯಿತು. ಆದರೂ ಬೆಂಕಿ ಕ್ಷಣದಲ್ಲಿ ಎಲ್ಲೆಡೆ ಹಬ್ಬಿತು. ಐಟಿ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಗಾಬರಿಗೊಂಡಿದ್ದು, ಎಲ್ಲರನ್ನು ಹೊರಗೆ ಕರೆತರಲಾಯಿತು. ಬೆಂಕಿಯಿಂದಾಗಿ ಎಲ್ಲೆಡೆ ಹೊಗೆ ತುಂಬಿಕೊಂಡಿದ್ದರಿಂದ ಆಂತಕ ಎದುರಾಗಿತ್ತು. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.