ಲಾರಿ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಬೆಂಗಳೂರು, ಜ.20: ಹಿಂದಿನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಹೊಸೂರು ಮುಖ್ಯರಸ್ತೆಯ ವೀರಸಂದ್ರ ಸಿಗ್ನಲ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಶಾಂತಿಪುರದ ಪಬನ್ ಠಾಕೂರ್(31) ಮೃತ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪಬನ್ ಠಾಕೂರ್ ಅವರು ಸ್ನೇಹಿತ ಸನ್ನಿ ಚಲಾಯಿಸುತ್ತಿದ್ದ ಬೌನ್ಸ್ ಸ್ಕೂಟರ್ನಲ್ಲಿ ಹಿಂದೆ ಕುಳಿತು ರವಿವಾರ ರಾತ್ರಿ ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ವೀರಸಂದ್ರ ಸಿಗ್ನಲ್ ಬಳಿ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದಿದ್ದು, ರಸ್ತೆಗೆ ಬಿದ್ದ ಠಾಕೂರ್ ಅವರ ಮೇಲೆ ಲಾರಿಯ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ಸನ್ನಿ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.