ಸದನದಲ್ಲಿ ಪಾಕಿಸ್ತಾನದ ಬೆನಝಿರ್ ಭುಟ್ಟೋ ರನ್ನು ಹಾಡಿ ಹೊಗಳಿದ ಬಿಜೆಪಿಯ ತೇಜಸ್ವಿನಿಗೌಡ
ಬೆಂಗಳೂರು, ಮಾ.11: ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝಿರ್ ಭುಟ್ಟೋ ಸೇರಿದಂತೆ ಅನೇಕ ಮಹಿಳೆಯರು ಅಸಾಧ್ಯದ ನಡುವೆ ಸಾಧನೆಗೈದಿದ್ದಾರೆ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.
ಬುಧವಾರ ವಿಧಾನ ಪರಿಷತ್ನಲ್ಲಿ ಮಧ್ಯಾಹ್ನ ಭೋಜನ ನಂತರ ನಡೆದ ಸಂವಿಧಾನ ಬಗ್ಗೆ ಚರ್ಚೆ ವೇಳೆ ತೇಜಸ್ವಿನಿ ಅವರು, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝಿರ್ ಭುಟ್ಟೋ ಅವರ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದರು.
'ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝಿರ್ ಭುಟ್ಟೋ ಸೇರಿದಂತೆ ಅನೇಕ ಮಹಿಳೆಯರು ಅಸಾಧ್ಯದ ನಡುವೆ ಸಾಧನೆಗೈದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್, ಮಾಜಿ ಮುಖ್ಯಮಂತ್ರಿ ಜಯಲಲಿತಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ರಾಜಕೀಯ ಕ್ಷೇತ್ರದಲ್ಲಿಯೇ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಿಗೆ ರಿಯಾಯಿತಿ ಬೇಡ ಎಂದ ಅವರು, ನಮ್ಮ ಸಾಧನೆಗಳಿಗೆ ಅವಕಾಶ ಮತ್ತು ವೇದಿಕೆ ದೊರೆಯುವಂತೆ ಆಗಬೇಕು. ಆಗ ಮಾತ್ರ ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.