ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂ.3: ರಾಜ್ಯ ಸರಕಾರವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬೀದರ್ ಜಿಲ್ಲಾಧಿಕಾರಿ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಾ.ಜಿ.ಸಿ.ಪ್ರಕಾಶ್ ಅವರನ್ನು ಮೈಸೂರು ಜಿಲ್ಲೆಯ ಪ್ರಾದೇಶಿಕ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಮೇಲುಸ್ತುವಾರಿ ಸಮಿತಿಯ ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಆರ್.ಮಹಾದೇವ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಆರೋಗ್ಯ ಆಯುಕ್ತಾಲಯದ ಯೋಜನಾ ನಿದೇರ್ಶಕರಾಗಿದ್ದ ರಾಮಚಂದ್ರನ್ ಆರ್.ಅವರನ್ನು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯ ಯೋಜನಾ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಅವರನ್ನು ರಾಷ್ಟ್ರೀಯ ಆರೋಗ್ಯ ಯೋಜನೆ ಹಾಗೂ ಆರೋಗ್ಯ ಆಯುಕ್ತಾಲಯದ ಯೋಜನಾ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.