ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಆರೋಪ ಪ್ರಕರಣ: ಮತ್ತೋರ್ವ ವಿದೇಶಿ ಪ್ರಜೆಯ ಬಂಧನ
ಬೆಂಗಳೂರು, ಸೆ.25: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಮತ್ತೋರ್ವ ವಿದೇಶಿ ಪ್ರಜೆಯನ್ನು ಶುಕ್ರವಾರ ಬಂಧಿಸಿದ್ದಾರೆ.
ನೈಜೀರಿಯಾ ದೇಶದ ಪ್ರಜೆ ಓಸ್ಸಿ ಎಂಬಾತ ಬಂಧಿತ ಆಗಿದ್ದು, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮೊಕದ್ದಮೆ ಸಂಬಂಧ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಡ್ರಗ್ಸ್ ಪೆಡ್ಲಿಂಗ್ ಆಗಿದ್ದು, ಈ ಹಿಂದೆ ಬಂಧನವಾಗಿರುವ ಆರೋಪಿ ಸೈಮನ್ ಎಂಬಾತನ ಸಹಚರನಾಗಿದ್ದ. ಸೈಮನ್ ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಮಂದಿ ಪೆಡ್ಲರ್ಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯಿಂದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸಿಸಿಬಿ ಕಚೇರಿಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story