ರಜನಿ ಚಿತ್ರಕ್ಕೆ 3 ಹೀರೋಯಿನ್ಗಳು
ಕಾಲಾ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ‘ತಲೈವಾ’ ರಜನಿಕಾಂತ್, ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗುತ್ತಿದ್ದಾರೆ. ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ಕೂಡಾ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರಂತೆ. ಈ ಚಿತ್ರದಲ್ಲಿ ರಜನಿಗೆ ನಾಯಕಿಯಾಗಿ 90ರ ದಶಕದ ತಮಿಳಿನ ಜನಪ್ರಿಯ ಹೀರೋಯಿನ್ ಸಿಮ್ರನ್ ನಟಿಸಲಿದ್ದಾರೆಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದ್ದು,ಅದೀಗ ದೃಢಪಟ್ಟಿದೆ.
ತಮಿಳಿನ ಇನ್ನೋರ್ವ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಹಾಗೂ ಮಾಲವಿಕಾ ಮೋಹನ್ ಈ ಚಿತ್ರದ ಇನ್ನಿಬ್ಬರು ನಾಯಕಿಯರು. ತನ್ನ 15 ವರ್ಷಗಳ ಸಿನೆಮಾ ಬದುಕಿನಲ್ಲಿ ಇದೇ ಮೊದಲ ಬಾರಿಗೆ ತ್ರಿಶಾ, ರಜನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಜನಿ ಅಭಿನಯದ ಒಂದೇ ಒಂದು ಚಿತ್ರದಲ್ಲಾದರೂ ನಟಿಸಲು ಹಂಬಲಿಸುವುದಾಗಿ ತ್ರಿಶಾ ಈ ಹಿಂದೆ ಈ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದೂ ಉಂಟು. ಇದೀಗ ಆಕೆಯ ಕನಸು ನನಸಾಗಿದೆ.
ಖ್ಯಾತ ಇರಾನಿ ನಿರ್ದೇಶಕ ಮಜೀದ್ ಮಜೀದಿ ನಿರ್ದೇಶನದ ಬಿಯೋಂಡ್ ಕ್ಲೌಡ್ಸ್ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಮಾಲವಿಕಾ ಮೋಹನ್ ಈ ಚಿತ್ರದ ಇನ್ನೋರ್ವ ನಾಯಕಿ. ಅಂದಹಾಗೆ ಈ ಚಿತ್ರದ ಮೂಲಕ ಮಾಲವಿಕಾ ಮೋಹನ್ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಮಲಯಾಳಂನ ಸೂಪರ್ಹಿಟ್ ಚಿತ್ರ ಪಟ್ಟಾಂಪೊಲೆ ಮೂಲಕ ಮಾಲವಿಕಾ, ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು.ತಮಿಳಿನ ಖ್ಯಾತ ಪ್ರೊಡಕ್ಷನ್ ಸಂಸ್ಥೆ ‘ಸನ್ಪಿಕ್ಚರ್ಸ್’ ನಿರ್ಮಿಸಲಿರುವ ಈ ಚಿತ್ರಕ್ಕೆ ಅನಿರುದ್ದ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಮುಂದಿನ ವರ್ಷಾಂತ್ಯದೊಳಗೆ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ.