ಮಂಗಳೂರು: ಟೇಕಾಫ್ ವೇಳೆ ವಿಮಾನದಲ್ಲಿ ದಟ್ಟ ಹೊಗೆ; ಹಾರಾಟ ರದ್ದು
ಮಂಗಳೂರು, ಮಾ.15: ಪ್ರಯಾಣಿಕರನ್ನು ಹೊತ್ತು ಟೇಕಾಫ್ಗೆ ಸಿದ್ಧಗೊಳ್ಳುತ್ತಿದ್ದಂತೆ ವಿಮಾನದ ಎಂಜಿನಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದರಿಂದ ಹಾರಾಟ ರದ್ದುಗೊಳಿಸಿದ ಘಟನೆ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ನಿನ್ನೆ ಬೆಳಗ್ಗೆ 8:50ಕ್ಕೆ 31 ಪಯಣಿಗರನ್ನು ಒಳಗೊಂಡ ಸ್ಪೈಸ್ ಜೆಟ್ ವಿಮಾನವೊಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಹಾರಾಡಲು ಸಿದ್ಧವಾಗಿತ್ತು. ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿಸಿಕೊಂಡು ವಿಮಾನವು ರನ್ ವೇ ಕಡೆಗೆ ತೆರಳುತ್ತಿದ್ದಂತೆ ಅದರ ಎಂಜಿನ್ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಎಂಜಿನ್ನಿಂದ ದಟ್ಟ ಹೊರ ಬರಲಾರಂಭಿಸಿದೆ. ಇದರಿಂದ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುವ ಭೀತಿ ಎದುರಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಹಾಗೂ ತುರ್ತು ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗಿಸುವಲ್ಲಿ ಯಶಸ್ವಿಯಾದರು.
ವಿಮಾನದ ಎಂಜಿನ್ನಿಂದ ಹೊಗೆ ಕಾಣಿಸಿಕೊಂಡಿರುವುದು ಪೈಲಟ್ ನ ಗಮನಕ್ಕೆ ಬಾರದೇ ಹೋಗಿದ್ದರೆ, ವಿಮಾನವು ಕೆಲವೇ ಕ್ಷಣಗಳಲ್ಲಿ ಟೇಕಾಫ್ ಆಗಿ ದೊಡ್ಡ ಮಟ್ಟದ ದುರಂತ ಸಂಭವಿಸುವ ಅಪಾಯವಿತ್ತು. 70ಕ್ಕೂ ಅಧಿಕ ಪ್ರಯಾಣಿಕರ ಸಾಮರ್ಥ್ಯದ ಈ ವಿಮಾನದಲ್ಲಿ ಕೇವಲ 31 ಪ್ರಯಾಣಿಕರಷ್ಟೇ ಇದ್ದಿದ್ದರಿಂದ ವಿಮಾನ ಅಪಾಯಕ್ಕೆ ಸಿಲುಕಿದ ತಕ್ಷಣ ಎಲ್ಲರನ್ನು ಕೆಳಗಿಳಿಸಲು ಸಾಧ್ಯವಾಗಿದೆ. ಬಳಿಕ ಆ ಪ್ರಯಾಣಿಕರನ್ನು ಬೇರೆ ವಿಮಾನಗಳಲ್ಲಿ ಹೈದರಾಬಾದ್ಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.