ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಸಮೀಪ ಗುಡ್ಡ ಕುಸಿತ; ಸಂಚಾರಕ್ಕೆ ತೊಡಕು
ಎರಡೂ ಬದಿ ಸಾಲುಗಟ್ಟಿ ನಿಂತ ವಾಹನಗಳು
ನೆಲ್ಯಾಡಿ, ಜು.21: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 48ರ ನೆಲ್ಯಾಡಿಯ ಮಣ್ಣಗುಂಡಿ ಬಳಿ ಹೆದ್ದಾರಿ ಸಮೀಪದ ಗುಡ್ಡ ಕುಸಿದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಗುಡ್ಡ ಕುಸಿತದ ಪರಿಣಾಮ ಭಾರೀ ಪ್ರಮಾಣದ ಮಣ್ಣು ಹೆದ್ದಾರಿಗೆ ಬಿದ್ದಿದೆ. ಎಲ್ ಆ್ಯಂಡ್ ಟಿ ಕಂಪೆನಿಯಿಂದ ಬಿಸಿ ರೋಡ್ ನಿಂದ ಅಡ್ಡಹೊಳೆವರೆಗೆ ಕಾಮಗಾರಿ ನಡೆಯುತ್ತಿದ್ದು, ಗುಡ್ಡ ಕುಸಿದಲ್ಲೂ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಇಂದು ಅವಘಡ ಸಂಭವಿಸಿದಾಗ ಯಾವೊಬ್ಬ ಸಿಬ್ಬಂದಿಯೂ ಸ್ಥಳದಲ್ಲಿರಲಿಲ್ಲ.
ಹೆದ್ದಾರಿ ಮೇಲೆ ಮಣ್ಣು ಕುಸಿದಿರುವ ಪರಿಣಾಮ ಸದ್ಯ ಸಂಚಾರ ಸ್ಥಗಿತಗೊಂಡಿದ್ದು, ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
Next Story