ಹೆಜಮಾಡಿ: ಬುಲೆಟ್ ಬೈಕ್ಗೆ ಬೆಂಕಿ
ಪಡುಬಿದ್ರಿ, ಅ. 26: ರೋಯಲ್ ಎನ್ಫೀಲ್ಡ್ ಬುಲೆಟ್ ಬೈಕೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಹೆಜಮಾಡಿ ಟೋಲ್ಗೇಟ್ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೇರಳದ ಎರ್ನಾಕುಲಂ ನಿವಾಸಿ ಫೆಬಿನ್ ಫೈಝಲ್ ಎಂಬವರು ಚಲಾಯಿಸುತ್ತಿದ್ದ ರೋಯಲ್ ಎನ್ಫೀಲ್ಡ್ ಬೈಕ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿತು. ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಿದ್ದ ಫೆಬಿನ್ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಕೇರಳದ ಎರ್ನಾಕುಲಂನಲ್ಲಿ ಇರುವ ತಮ್ಮ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಬೈಕ್ನಲ್ಲಿ ಸವಾರಿ ಬೆಳೆಸಿದ್ದರು. ಮಧ್ಯಾಹ್ನ ಸುಮಾರು 12:30ರ ವೇಳೆಗೆ ಪಡುಬಿದ್ರಿ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ ವೇಳೆ ಹೆಜಮಾಡಿ ಟೋಲ್ಗೇಟ್ ಪರಿಸರದಲ್ಲಿ ಬೈಕ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಟೋಲ್ಗೇಟ್ ಸಿಬ್ಬಂದಿಗಳು ಬೆಂಕಿ ನಂದಿಸಿ ಹತೋಟಿಗೆ ತಂದರು. ಆದರೆ ಇಷ್ಟೊತ್ತಿಗೆ ಬೈಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಫೆಬಿನ್ನ ಬಳಿಯಿದ್ದ ಬ್ಯಾಗ್ ಕೂಡ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಅವರ ಬಳಿ ಇದ್ದ ಹಣ, ಬಟ್ಟೆ ಮತ್ತು ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಬೈಕ್ಗೆ ಬೆಂಕಿ ಹತ್ತುವ ವೇಳೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಲಾಗಿದೆ ಮತ್ತೆರಡು ದ್ವಿಚಕ್ರ ವಾಹನಗಳೂ ಬೆಂಕಿಯ ಹಬೆಗೆ ತುತ್ತಾಗಿದ್ದು ಭಾಗಶಃ ಹಾನಿಗೆ ಒಳಗಾಗಿದೆ. ಈ ಅಗ್ನಿ ದುರಂತದಿಂದಾಗಿ ಟೋಲ್ಗೇಟ್ ಕಟ್ಟಡದ ಕಿಟಕಿಯ ಗಾಜು ಮತ್ತು ಗೋಡೆಗೂ ಹಾನಿಯುಂಟಾಗಿದೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳ ಪರಿಶೀಲಿಸಿದ್ದಾರೆ.