ಸಂಚಾರ ನಿಯಮ ಉಲ್ಲಂಘನೆ: 3 ತಿಂಗಳಲ್ಲಿ 18 ಚಾಲನಾ ಪರವಾನಿಗೆ ರದ್ದತಿಗೆ ಶಿಫಾರಸು: ಎಸ್ಪಿ
ಮಂಗಳೂರು, ಎ.6: ದ.ಕ. ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಜನವರಿಯಿಂದ ಮಾ.28ರವರೆಗೆ ಒಟ್ಟು 18 ಮಂದಿಯ ಚಾಲನಾ ಪರವಾನಿಗೆ ರದ್ದತಿಗೆ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ. ದಲಿತ ಕುಂದುಕೊರತೆಗಳ ಜಿಲ್ಲಾ ಮಟ್ಟದ ಮಾಸಿಕ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷ 86 ಚಾಲನಾ ಪರವಾನಿಗೆ ರದ್ದತಿಗೆ ಶಿಫಾರಸು ಮಾಡಲಾಗಿತ್ತು ಎಂದು ಹೇಳಿದರು. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವನ್ನು ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಫೆಬ್ರವರಿಯಿಂದ ಜಾರಿಗೊಳಿಸಲಾಗಿದೆ. ಇದರ ಉಲ್ಲಂಘನೆಗೆ ಸಂಬಂಧಿಸಿ ಆ ತಿಂಗಳೊಂದರಲ್ಲೇ 5,687 ಪ್ರಕರಣಗಳನ್ನು ದಾಖಲಿಸಿ 5,98,400 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
Next Story