ರಾಜೇಂದ್ರ ಪ್ರಸಾದ್‌ಗೆ ‘ಕಡೆಂಗೋಡ್ಲು ಕಾವ್ಯಪ್ರಶಸ್ತಿ’

ಉಡುಪಿ, ಎ.11: ಕವಿಯೊಬ್ಬರ ಅಪ್ರಕಟಿತ ಕವನ ಸಂಕಲನಕ್ಕೆ ನೀಡುವ ವಾರ್ಷಿಕ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ 2016ನೆ ಸಾಲಿಗೆ ಯುವ ಕವಿ ರಾಜೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ.
ರಾಜೇಂದ್ರ ಪ್ರಸಾದ್‌ರ ‘ಲಾಲೋನ ಕನಸು’ ಎಂಬ ಅಪ್ರಕಟಿತ ಕವನ ಸಂಕಲನಕ್ಕೆ ಈ ಬಾರಿಯ ಪ್ರಶಸ್ತಿ ಯನ್ನು ನೀಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋ ಧನಾ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಕೃಷ್ಣ ಭಟ್ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಬಳಿಯ ಕೊಡವತ್ತಿ ಗ್ರಾಮದಲ್ಲಿ ಜನಿಸಿದ (1987) ರಾಜೇಂದ್ರ ಪ್ರಸಾದ್, ಮೈಸೂರು ವಿವಿಯಿಂದ ಎಂ.ಕಾಂ ಹಾಗೂ ಕರ್ನಾಟಕ ಮುಕ್ತ ವಿವಿಯಿಂದ ಕನ್ನಡ ಎಂ.ಎ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಕರ್ನಾಟಕ ಇತಿಹಾಸ, ಝೆನ್ ಪೇಂಟಿಂಗ್, ತತ್ವ ಹಾಗೂ ಪಾಕಶಾಸ್ತ್ರಗಳಲ್ಲಿ ಅಧ್ಯಯನಶೀಲರು.
ಸ್ವತ: ಕವಿಯಾದ ಇವರ ‘ಭೂಮಿಗಂಧ’ (2006) ‘ಚಂದ್ರನೀರ ಹೂ’ (2013) ‘ಕೋವಿ ಮತ್ತು ಕೊಳಲು’ (2014) ಪ್ರಕಟಿತ ಕವಿತಾ ಸಂಕಲನಗಳು. ಖ್ಯಾತ ಕವಿ, ವಿಮರ್ಶಕ ಜಯರಾಮ ಕಾರಂತ, ಡಾ.ಯು. ಮಹೇಶ್ವರಿ, ಡಾ. ತಾಳ್ತಜೆ ವಸಂತ ಕುಮಾರ, ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಇವರನ್ನೊಳಗೊಂಡ ತಂಡ ವಿಜೇತರ ಆಯ್ಕೆ ನಡೆಸಿದೆ ಎಂದು ಪ್ರಕಟನೆ ತಿಳಿಸಿದೆ.





