ಟೆಂಪೊ ಢಿಕ್ಕಿ ಹೊಡೆದು ವೃದ್ಧೆ ಮೃತ್ಯು
ಮಂಗಳೂರು, ಜ.20: ರಸ್ತೆ ದಾಟುತ್ತಿದ್ದ ವೃದ್ಧೆಗೆ ಟೆಂಪೊವೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಕುತ್ತಾರ್ ನಿವಾಸಿ ಜಯಂತಿ ರತ್ನಾಕರ್ (66) ಮೃತ ಮಹಿಳೆ.
ತೊಕ್ಕೊಟ್ಟು ಜಂಕ್ಷನ್ ಸಮೀಪ ರಸ್ತೆ ದಾಟುತ್ತಿದ್ದ ಜಯಂತಿ ಅವರಿಗೆ ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಟೆಂಪೊ ಢಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧೆ ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಕೂಡಲೇ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಂತಿ ಮೃತಪಟ್ಟಿದ್ದಾರೆ.
ವೃದ್ಧೆಗೆ ಢಿಕ್ಕಿ ಹೊಡೆಸಿದ ಟೆಂಪೋ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಆರೋಪಿ ವಿರುದ್ಧ ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story