‘ಸ್ಕೂಲ್ ಅಡ್ಮಿಷನ್’ ಕನ್ನಡ ಕಿರುಚಿತ್ರ ಬಿಡುಗಡೆ
ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು, ಆ.14: ಪೀಠ ಕ್ರಿಯೇಷನ್ಸ್ ತಂಡದಿಂದ ನಿರ್ಮಾಣಗೊಂಡ ‘ಸ್ಕೂಲ್ ಅಡ್ಮಿಷನ್’ ಎಂಬ ಕನ್ನಡ ಕಿರುಚಿತ್ರವನ್ನು ಶಾಸಕ ಡಿ. ವೇದವ್ಯಾಸ್ ಕಾಮತ್ ಮಂಗಳವಾರ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದರು.
ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಇಂದಿನ ಶಾಲೆಗಳಲ್ಲಿ ಬೇರೆ ಬೇರೆ ರೀತಿಯ ಸೌಲಭ್ಯಗಳು ದೊರಕುತ್ತಿರುವ ಸಂದರ್ಭ ಯೋಧರ ಮಕ್ಕಳಿಗೂ ವಿಶೇಷ ಸೌಲಭ್ಯಗಳನ್ನು ಶಾಲೆಗಳಲ್ಲಿ ನೀಡಬೇಕು ಎನ್ನುವ ಸಂದೇಶದೊಂದಿಗೆ ನಿರ್ಮಾಣಗೊಂಡ ಕಿರುಚಿತ್ರ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ದೇಶ ರಕ್ಷಣೆಗೆ ಹಗಲಿರುಳು ಕಷ್ಟಪಡುವ ಯೋಧರಿಗೆ ಶಕ್ತಿ ಮತ್ತು ಪ್ರೇರಣೆ ನೀಡುವ ಕಾರ್ಯ ಈ ಕಿರುಚಿತ್ರದ ಮುಖಾಂತರ ಆಗಿದೆ. ಈ ಕಿರುಚಿತ್ರದ ಉದ್ದೇಶ, ಸಂದೇಶ ಎಲ್ಲ ಶಾಲಾ ಅಡಳಿತ ಮಂಡಳಿಗೂ ತಲುಪಿ ಅವರು ಇದರಿಂದ ಪ್ರೇರಣೆಗೊಂಡು ಚಿತ್ರದಲ್ಲಿ ಹೇಳಿರುವ ಸಂದೇಶವನ್ನು ಜಾರಿಗೊಳಿಸುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭ ಚಿತ್ರದ ನಿರ್ದೇಶಕ ದಿಲೀಪ್ ರೈ, ಕಾರ್ಯಕಾರಿ ನಿರ್ಮಾಪಕ ಯತೀಶ್ ಕುಡುಪು, ದೀಪಕ್ ಶೆಟ್ಟಿ, ಮಹೇಶ್ ಮೂಲ್ಯ, ಶಿವಪ್ರಕಾಶ್ ಕುಡುಪು, ಜೀವನ್ ಅಚಾರ್ಯ ಉಪಸ್ಥಿತರಿದ್ದರು.
ಪೀಠ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡ ‘ಸ್ಕೂಲ್ ಅಡ್ಮಿಷನ್’ ಕಿರುಚಿತ್ರವನ್ನು ದಿಲೀಪ್ ರೈ ಸಾಹಿತ್ಯ ಬರೆದು, ನಿರ್ದೇಶಿಸಿದ್ದಾರೆ. ಯತೀಶ್ ಕುಡುಪು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮಹೇಶ್ ಮೂಲ್ಯ ಸಹ ನಿರ್ದೇಶನ ಮಾಡಿದ್ದಾರೆ. ಕ್ಯಾಮರಾದಲ್ಲಿ ವಿಕ್ಕಿ ಸಾಲ್ಯಾನ್, ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಜೀವನ್ ಅಚಾರ್ಯ ಪೋಸ್ಟರ್ ಡಿಸೈನ್ ಮಾಡಿದ್ದು, ದೀಪಕ್ ಶೆಟ್ಟಿ ಮತ್ತು ಗುಣಕರ್ ಪುತ್ತೂರು ಸಹಕರಿಸಿದ್ದಾರೆ. ಚಿತ್ರದಲ್ಲಿ ಮೋನಾ ಮೆಂಡೋನ್ಸ್, ಸಂಪತ್ ಕುಲಾಲ್, ಹರಿಣಿ ಬಂಜಾನ್, ಅಕ್ಷತಾ, ಶಿವಪ್ರಕಾಶ್ ಕುಡುಪು ಹಾಗೂ ಶ್ರೀಯಾ ಯು. ಮೊಯ್ಲಿ ಅಭಿನಯಿಸಿದ್ದಾರೆ.