ರೇಣುಕಾಚಾರ್ಯ ವಿರುದ್ಧ ಎಸ್ಡಿಪಿಐಯಿಂದ ಕ್ರಿಮಿನಲ್ ದೂರು ದಾಖಲು
ಬೆಂಗಳೂರು, ಜ.25: ನನ್ನ ಕ್ಷೇತ್ರದಲ್ಲಿರುವ ಮುಸ್ಲಿಮರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಅವರು ನನಗೆ ಮತ ಹಾಕಲಿಲ್ಲ. ಮಸೀದಿ ಮದ್ರಸಗಳಲ್ಲಿ ಶಸ್ತ್ರಾಸ್ತಗಳನ್ನು ಸಂಗ್ರಹಿಸಿಡಲಾಗಿದೆ. ಮದ್ರಸಗಳಲ್ಲಿ ಭಯೋತ್ಪಾದನೆ ಪೋಷಿಸಲಾಗುತ್ತಿದೆ ಎಂದು ಇತ್ತೀಚೆಗೆ ವಿಕಾಸಸೌಧದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಎಸ್ಡಿಪಿಐ ಕ್ರಿಮಿನಲ್ ದೂರು ದಾಖಲಿಸಿದೆ.
ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ರೇಣುಕಾಚಾರ್ಯ ಧರ್ಮಗಳ ನಡುವೆ ದ್ವೇಷ ಹಾಗೂ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ಮತೀಯ ಹಿಂಸಾಚಾರಗಳಿಗೆ ಪ್ರಚೋದನೆ ನೀಡಿದ್ದಾರೆ. ಮತ ಹಾಕದ ಮುಸ್ಲಿಮರ ಅಭಿವೃದ್ಧಿ ಮಾಡುವುದಿಲ್ಲ ಎನ್ನುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಹಾಗಾಗಿ ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.