ಮಂಗಳೂರು: ಆಯುಷ್ಮಾನ್ ಕಾರ್ಡ್ನಲ್ಲಿ ಕೋವಿಡ್-19 ಚಿಕಿತ್ಸೆ ಲಭ್ಯ
ಸಾಂದರ್ಭಿಕ ಚಿತ್ರ
ಮಂಗಳೂರು, ಜು.9: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಕೋವಿಡ್-19 ಚಿಕಿತ್ಸೆಯೂ ಸೇರ್ಪಡೆಯಾಗಿದೆ.
ದ.ಕ. ಜಿಲ್ಲೆಯಲ್ಲಿ 240 ಸಾಮಾನ್ಯ ಸೇವಾ ಕೇಂದ್ರಗಳಿದ್ದು, ಸಾರ್ವಜನಿಕರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಆಯುಷ್ಮಾನ್ ಭಾರತ್ ಕಾರ್ಡನ್ನು ಮಾಡಿಸಿಕೊಳ್ಳಬಹುದಾಗಿದೆ. ಕಾರ್ಡನ್ನು ಮಾಡಿಸುವ ಸಂದರ್ಭ ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಾಪಾಡುವುದು ಅಗತ್ಯ.
ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ವರ್ಷಕ್ಕೆ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಎಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್ ದರದ ಶೇ.30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಸಹ ಚಿಕಿತ್ಸೆ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ, ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.