ಮಂಗಳೂರು ಮೀನುಗಾರಿಕೆ: ಒಂದು ತಿಂಗಳು ಮುಂದಕ್ಕೆ
ಸಾಂದರ್ಭಿಕ ಚಿತ್ರ
ಮಂಗಳೂರು, ಜು.30: ನಿಯಮದಂತೆ ಕರಾವಳಿ ತೀರದಲ್ಲಿ ಆ.1ರಿಂದ ಮೀನುಗಾರಿಕೆ ಆರಂಭಿಸಲು ಅವಕಾಶವಿದ್ದರೂ ಕೂಡ ಕೊರೋನ ಹಿನ್ನೆಲೆಯಲ್ಲಿ ಆ.1ರ ಬದಲು ಸೆ.1ರಿಂದ ಮಂಗಳೂರಿನಲ್ಲಿ ಮೀನುಗಾರಿಕೆ ನಡೆಸಲು ಮೀನುಗಾರ ಪ್ರಮುಖರು ನಿರ್ಧರಿಸಿದ್ದಾರೆ.
ಆ.1ರಿಂದ ಸೆ.1ರ ಮಧ್ಯೆ ಮೀನುಗಾರಿಕಾ ಕಾರ್ಮಿಕರನ್ನು ಬೇರೆ ರಾಜ್ಯಗಳಿಂದ ಕರೆತಂದು ಅವರಿಗೆ ಸರಕಾರದ ನಿಯಮಾವಳಿ ಪ್ರಕಾರ ಕ್ವಾರಂಟೈನ್ ಕಲ್ಪಿಸಲು ಸೂಕ್ತ ಕ್ರಮ ಹಾಗೂ ಸೆ.1ರಿಂದ ಮೀನುಗಾರಿಕೆ ಆರಂಭವಾಗುವಾಗ ಕೈಗೊಳ್ಳಬೇಕಾದ ನಿಯಮಾವಳಿಗಳ ಬಗ್ಗೆ ಮತ್ತೊಮ್ಮೆ ಮೀನುಗಾರರು ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಜತೆಗೆ ಪರಾಮರ್ಶೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮೀನುಗಾರ ಮುಖಂಡರು ತೀರ್ಮಾನಿಸಿದ್ದಾರೆ.
ಮೀನು ಸಂತಾನೋತ್ಪತ್ತಿ ಹಿನ್ನಲೆಯಲ್ಲಿ ಜೂ.15 ರಿಂದ ಮೀನುಗಾರಿಕೆ ನಿಷೇಧ ಆರಂಭವಾಗಿತ್ತು. ಸಾಮಾನ್ಯವಾಗಿ ಜೂ.1ರಿಂದ ಆರಂಭಗೊಂಡು 60 ದಿನಗಳ ನಿಷೇಧವಿದ್ದರೂ ಕೊರೋನ ಲಾಕ್ಡೌನ್ ಹಿನ್ನಲೆಯಲ್ಲಿ ಸರಕಾರ ಈ ಬಾರಿ ಜೂ.15ರವರೆಗೆ ಮೀನುಗಾರಿಕೆಗೆ ಅವಕಾಶ ನೀಡಿತ್ತು.
ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ಪರ್ಸಿನ್ ಹಾಗೂ ಟ್ರಾಲ್ ಸಹಿತ 1200 ಬೋಟುಗಳಿವೆ. ಐದಾರು ಸಾವಿರ ಮಂದಿ ಕಾರ್ಮಿಕರು ದುಡಿಯುತ್ತಾರೆ. ಈ ಪೈಕಿ ಶೇ.75ರಷ್ಟು ಮಂದಿ ಆಂಧ್ರಪ್ರದೇಶ, ಒರಿಸ್ಸಾ, ತಮಿಳುನಾಡು ಸಹಿತ ಹೊರ ರಾಜ್ಯಗಳಿಗೆ ಸೇರಿದವರಿದ್ದಾರೆ. ಅಲ್ಲದೆ ಐಸ್ಪ್ಲಾಂಟ್ ಹಾಗೂ ಫಿಶ್ಮಿಲ್ಗಳಲ್ಲಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಕೂಡ ಹೊರರಾಜ್ಯದವರಿದ್ದಾರೆ. ಇವರಲ್ಲಿ ಬಹುತೇಕ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಅವರು ವಾಪಸ್ ಬಂದರೆ ಅವರಿಗೆ ಕ್ವಾರಂಟೈನ್ಗೆ ವ್ಯವಸ್ಥೆ ಸಹಿತ ಹಲವು ಸಮಸ್ಯೆಗಳಿವೆ. ಇದಕ್ಕಾಗಿ ಒಂದು ತಿಂಗಳು ಮೀನುಗಾರಿಕೆಯನ್ನೇ ಮುಂದೂಡಲು ಮುಖಂಡರು ತೀರ್ಮಾನಿಸಿದ್ದಾರೆ.
ಹಳೆ ಬಂದರಿನಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಟ್ರಾಲ್ಬೋಟು ಮೀನುಗಾರರ ಸಂಘ, ಪರ್ಸಿನ್ ಮೀನುಗಾರರ ಸಂಘ, ಹಸಿಮೀನು ವ್ಯಾಪಾರಸ್ಥರ ಸಂಘ, ಸೀ ಫುಡ್ ಬೈಯರ್ಸ್ ಸಂಘ, ಒಣಮೀನು ವ್ಯಾಪಾರಸ್ಥರ ಸಂಘ, ರಾಣಿ ಮೀನು ಸಂಸ್ಕರಣಾ ಘಟಕದ ಪ್ರಮುಖರು, ಮೀನುಗಾರ ಪ್ರಮುಖರಾದ ನಿತಿನ್ ಕುಮಾರ್, ಮೋಹನ್ ಬೆಂಗ್ರೆ, ಅಹ್ಮದ್, ರಾಜೇಶ್ ಪುತ್ರನ್, ಇಬ್ರಾಹೀಂ, ಎಸ್.ಎಂ. ಭಾಷಾ ಉಪಸ್ಥಿತರಿದ್ದರು.
ಕೊರೋನ ಕಾರಣದಿಂದ ಮಂಗಳೂರು ಧಕ್ಕೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಹಾಗೂ ಕಾರ್ಮಿಕರ ಕ್ವಾರಂಟೈನ್ ನಿಯಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮೀನುಗಾರ ಮುಖಂಡರು ಬುಧವಾರ ಸಭೆ ನಡೆಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಆ.1ರಿಂದ ಮೀನುಗಾರಿಕೆ ನಡೆಸುವುದು ಕಷ್ಟ ಎಂದು ಅಭಿಪ್ರಾಯಕ್ಕೆ ಬರಲಾಯಿತು. ಹೀಗಾಗಿ ಒಂದು ತಿಂಗಳ ನಂತರ ಸೆ.1ರಿಂದ ಮೀನುಗಾರಿಕೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು.
ನಿತಿನ್ ಕುಮಾರ್ ಅಧ್ಯಕ್ಷರು, ಮಂಗಳೂರು ಟ್ರಾಲ್ ಬೋಟು ಮೀನುಗಾರರ ಸಂಘ
ಕೊರೋನದಿಂದ ಕಾರ್ಮಿಕರಿಗೆ ಹಾಗೂ ಮೀನುಗಾರಿಕೆಗೂ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಈ ಬಾರಿ ಆ.1ರ ಬದಲು ಸೆ.1ರಿಂದ ಆರಂಭಿಸಲು ಮೀನುಗಾರಿಕೆ ಆರಂಭಿಸಲು ತೀರ್ಮಾನಿಸಿದ್ದೇವೆ. ಮೋಹನ್ ಬೆಂಗ್ರೆ
ಅಧ್ಯಕ್ಷರು, ಮಂಗಳೂರು ಪರ್ಸಿನ್ ಬೋಟು ಮೀನುಗಾರರ ಸಂಘ