ಮಂಗಳೂರು ಗೋಲಿಬಾರ್ ಪ್ರಕರಣ : ವಿಚಾರಣೆ ಮುಂದೂಡಿಕೆ
ಮಂಗಳೂರು, ಆ.10: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದ್ದ ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣದ ಬಗ್ಗೆ ಸಾಕ್ಷ-ಹೇಳಿಕೆ ಸಲ್ಲಿಸಲು ಆ.11ರಂದು ನಿಗದಿಯಾಗಿದ್ದ ಮ್ಯಾಜಿಸ್ಟೀರಿಯಲ್ ವಿಚಾರಣೆ ಮುಂದೂಡಿಕೆಯಾಗಿದೆ.
ಕಳೆದ ಡಿಸೆಂಬರ್ 19ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ಗೆ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಬಲಿಯಾಗಿದ್ದರು. ಈ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ನೇಮಕಗೊಳಿಸಲಾಗಿತ್ತು.
ಈ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿ ಸಾಕ್ಷ ಅಥವಾ ಹೇಳಿಕೆಯನ್ನು ನೀಡಲು ಆ.11ರಂದು ದಿನ ನಿಗದಿಗೊಳಿಸಿ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಇತ್ತೀಚೆಗೆ ಸೂಚನೆ ಹೊರಡಿಸಿದ್ದರು. ಆದರೆ, ಅದೇ ದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರ ಪ್ರವಾಸ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗವಹಿಸುವ ಹಿನ್ನೆಲೆಯಲ್ಲಿ ಮ್ಯಾಜಿಸ್ಟೀರಿಯಲ್ ವಿಚಾರಣೆ ಮುಂದೂಡಲಾಗಿದೆ. ಮುಂದಿನ ವಿಚಾರಣಾ ದಿನಾಂಕದ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.