ಕೊಂಕಣಿ ಭಾಷೆಗೆ ಐತಿಹಾಸಿಕ ಹಿನ್ನಲೆಯಿದೆ : ವಿಚಾರಗೋಷ್ಠಿಯಲ್ಲಿ ಧ್ವನಿಸಿದ ಪರಂಪರೆ
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ವಿಚಾರಗೋಷ್ಠಿ
ಪುತ್ತೂರು, ಡಿ.6 : ಕೊಂಕಣಿ ಭಾಷೆಗೆ ಉತ್ತಮ ಪರಂಪರೆ ಮತ್ತು ಐತಿಹಾಸಿಕ ಹಿನ್ನಲೆಯಿದೆ. ಈ ಭಾಷೆಗೆ ದೇವನಾಗರಿ ಲಿಪಿಯೇ ಮೂಲಾಧಾರವಾಗಿದೆ ಎಂದು ಉಪ್ಪಿನಂಗಡಿ ಇಂಡಿಯನ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರು ವಿನ್ಸೆಂಟ್ ಫೆರ್ನಾಂಡಿಸ್ ಹೇಳಿದರು.
ಅವರು ಸಂತ ಫಿಲೋಮಿನಾ ಕಾಲೇಜ್ನ ಸ್ನಾತಕ್ಕೋತರ ಅಧ್ಯಯನ ಕೇಂದ್ರದ ವತಿಯಿಂದ ಕೊಂಕಣಿ ಸಂಘದ ಆಶ್ರಯದಲ್ಲಿ ನಡೆದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಒರಿಸ್ಸಾದ ಸರಸ್ವತಿ ನದಿಯ ಎರಡೂ ಬದಿಗಳಲ್ಲಿ ವಾಸವಾಗಿದ್ದ ಸಾಗುವಳಿದಾರರ ಭಾಷೆಯಾಗಿದ್ದ ಕೊಂಕಣಿಯು ಮರಾಠಿಗರ ದಾಳಿಯ ಬಳಿಕ ಕರಾವಳಿ ಪ್ರದೇಶಕ್ಕೆ ಬಂದಿರುವುದಾಗಿ ಇತಿಹಾಸವಿದೆ. ಈ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದರು.
ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ನ ಧರ್ಮಗುರು ಫಾ. ಫ್ರಾನ್ಸಿಸ್ ರೋಡ್ರಿಗಸ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕಾಲೇಜ್ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೊಂಕಣಿ ಸಂಘದ ನಿರ್ದೇಶಕ ಫಾ. ರಿತೇಶ್ ರೋಡ್ರಿಗಸ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಲವಿಟಾ ಲೋಬೋ ಸ್ವಾಗತಿಸಿದರು. ಕಾರ್ಯದರ್ಶಿ ಅಂಬಿಕಾ ವಂದಿಸಿದರು. ಜೆಸಿಂತಾ ಕಾರ್ಯಕ್ರಮ ನಿರೂಪಿಸಿದರು.