ಬೇಡಿಕೆ ಈಡೇರಿಸದಿದ್ದರೆ ಚುನಾವಣೆಗೆ ಬಹಿಷ್ಕಾರ: ರಾಜ್ಯ ಸರಕಾರಕ್ಕೆ ಅತಿಥಿ ಉಪನ್ಯಾಸಕರ ಎಚ್ಚರಿಕೆ

ಉಡುಪಿ, ಫೆ.10: ಅತಿಥಿ ಉಪನ್ಯಾಸಕರು ಕಳೆದ 15 ವರ್ಷಗಳಿಂದ ವಿವಿಧ ಕಾಲೇಜುಗಳಲ್ಲಿ ದುಡಿಯು ತ್ತಿದ್ದಾರೆ. ಆದರೆ ಅವರನ್ನು ಇದುವರೆಗೆ ಖಾಯಂಗೊಳಿಸಿಲ್ಲ ಹಾಗೂ ಸರಿಯಾದ ವೇತನ ಕೂಡ ಪಾವತಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯನ್ನು ಕುಟುಂಬ ಸಮೇತವಾಗಿ ಬಹಿಷ್ಕರಿಸುತ್ತೇವೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್‌ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ನಡೆಸಿದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಒತ್ತನ್ನು ಉಪನ್ಯಾಸಕರಿಗೂ ನೀಡಬೇಕು. ಕನಿಷ್ಠ 14 ಸಾವಿರ ರೂ. ವೇತನವನ್ನಾದರೂ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು. ತಾಕತ್ತಿದ್ದರೆ ನಮ್ಮನ್ನು ವಜಾಗೊಳಿ ಸುವ ನಿರ್ಧಾರವನ್ನು ಸರಕಾರ ಮಾಡಲಿ ಎಂದವರು ಸವಾಲು ಹಾಕಿದರು.
ಬೇಡಿಕೆಗಳು: ಎಲ್ಲ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಬೇಕು. ಕಾನೂನು ತೊಡಕುಗಳ ನಿವಾರಣೆಗೆ ತಜ್ಞರ ಸಮಿತಿ ರಚಿಸಬೇಕು. ಮಾಸಿಕ ವೇತನ 25 ಸಾವಿರ ರೂ.ಗೆ ಹೆಚ್ಚಿಸಬೇಕು. ವರ್ಷದ 12 ತಿಂಗಳೂ ವೇತನ ನೀಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಪಾವತಿ ಮಾಡಬೇಕು. ಖಾಯಂ ನೇಮಕಾತಿ ಸಂದರ್ಭ ವಯೋ ಮಿತಿಮೀರಿದ, ಮೀರುತ್ತಿರುವ ಅತಿಥಿ ಉಪನ್ಯಾಸಕರನ್ನೇ ಸೇವಾ ಹಿರಿತನ ಹಾಗೂ ವಯೋಮಿತಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್ ರೈ, ಹಿರಿಯ ಉಪನ್ಯಾಸಕ ರಫೀಕ್ ಖಾನ್, ಶ್ರೀನಿವಾಸ್, ನಮಿತಾ ಆಚಾರ್ಯ, ಸುಜಾತಾ, ಕರವೇ ಸಂಘಟನೆಯ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಮುಖರಾದ ರಮೇಶ್ ಶೆಟ್ಟಿ, ಅನ್ಸಾರ್ ಅಹ್ಮದ್, ಪ್ರಸನ್ನ ಶೆಟ್ಟಿ ಹೆಬ್ರಿ ಮತ್ತಿತರರು ಉಪಸ್ಥಿತರಿದ್ದರು.
ಜ.12ರಿಂದ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಸರಕಾರಿ ಕಾಲೇಜುಗಳ ತರಗತಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತೀರಾ ತೊಂದರೆ ಅನುಭವಿಸಬೇಕಾಗುತ್ತದೆ. ಆದುದರಿಂದ ಸರಕಾರ ಕೂಡಲೇ ಇದಕ್ಕೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು ಎಂದು ಈ ಹೋರಾಟದಲ್ಲಿ ಭಾಗಿಯಾಗಿರುವ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಭವಂತ್ ಪೂಜಾರಿ, ಕಾರ್ಯಾಧ್ಯಕ್ಷ ಮನೀಶ್ ಶೆಟ್ಟಿ, ಧನುಷ್ ಜತ್ತನ್ ಆಗ್ರಹಿಸಿದ್ದಾರೆ.







